ದೇವಾಲಯಗಳು ಶೋಷಣೆ ಕೇಂದ್ರಗಳಾಗಬಾರದು
ವಿಜಯಪುರ.ಮಾ೨:ಎಲ್ಲಿಯೇ ಆಗಲಿ ದೇವಾಲಯಗಳು ಧಾರ್ಮಿಕ ಕೇಂದ್ರಗಳಾಗಬೇಕಾಗಿದ್ದು,ಸಾರ್ವಜನಿಕರಿಗೆ ನೆಮ್ಮದಿಯ ತಾಣಗಳಾಗಬೇಕೆ ಹೊರತು, ಶೋಷಣೆಯ ಕೇಂದ್ರಗಳ ಆಗಬಾರದೆಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದಪುರಿ ಮಹಾ ಸ್ವಾಮೀಜಿಗಳು ತಿಳಿಸಿದರು.
ಅವರು ಇಲ್ಲಿನ ಮಂಡಿಬೆಲೆ ರಸ್ತೆಯ ಶ್ರೀ ಮಹರ್ಷಿ ವಾಲ್ಮೀಕಿ ಉದ್ಯಾನವನದಲ್ಲಿ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಏರ್ಪಡಿಸಲಾದ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ, ಮಾತನಾಡುತ್ತಿದ್ದರು.
ಮನುಷ್ಯರು ಜಾತಿಯ ಕಾರಣದಿಂದ ಶ್ರೇಷ್ಠರಾಗಬಾರದು. ನೀತಿಯ ಕಾರಣದಿಂದ ಶ್ರೇಷ್ಠರಾಗಬೇಕು. ಧರ್ಮದ ಮೂಲ ತ್ಯಾಗವಾಗಿದ್ದು, ಹಣ, ಅಧಿಕಾರ, ಲಾಲಸೆಗಳಿಂದ ಹಪಹಪಿಸುವವರು ಧರ್ಮವನ್ನು ಎತ್ತಿ ಹಿಡಿಯಲು ಸಾಧ್ಯವಿಲ್ಲವೆಂದು ತಿಳಿಸಿದರು.
ಮಾಂಸಹಾರಿಗಳು;- ವಿಧಾನ ಪರಿಷತ್ತಿನ ಮಾಜಿ ವಿರೋಧಪಕ್ಷದ ನಾಯಕರಾಗಿದ್ದ ವಿ ಎಸ್ ಉಗ್ರಪ್ಪರವರು ಮಾತನಾಡುತ್ತಾ, ರಾಮ, ಲಕ್ಷ್ಮಣ ಸೀತೆ ಇವರು ಕ್ಷತ್ರಿಯರಾಗಿದ್ದು ಮಾಂಸಾಹಾರಿಗಳಾಗಿದ್ದರು. ಸೀತೆ ತನ್ನ ಪತಿಯೊಂದಿಗೆ ೧೪ ವರ್ಷ ವನವಾಸ ಹೋಗುವ ಸಂದರ್ಭದಲ್ಲಿ ತಮ್ಮನ್ನು ಏನೂ ತೊಂದರೆಯಾಗದೆ ಕಾಪಾಡಬೇಕೆಂದು ಗಂಗಾಮಾತೆಯಲ್ಲಿ ಹರಕೆ ಹೊತ್ತುಕೊಂಡು, ನಾವು ಬಂದ ನಂತರ ಗಂಗೆಗೆ ಅವಶ್ಯಕವಾದಷ್ಟು ಮಾಂಸಾಹಾರ ಹಾಗೂ ಮಧ್ಯವನ್ನು ನೈವೇದ್ಯ ಮಾಡುವುದಾಗಿ ತಿಳಿಸಿದ್ದರು.
ಋಷಿ ಭರದ್ವಾಜ ಮಹಾಮನಿಗಳು ತಮ್ಮ ಆಶ್ರಮಕ್ಕೆ ಬಂದ ರಾಮ, ಲಕ್ಷ್ಮಣ, ಸೀತೆಗೆ ತಾವು ಸಸ್ಯಹಾರಿಗಳಾಗಿದ್ದರೂ ಸಹ ನೀವು ಮಾಂಸಾಹಾರಿಗಳೆಂದು ರಾಮ, ಲಕ್ಷ್ಮಣ, ಸೀತೆಗೆ ಮಾಂಸಹಾರದ ಭೋಜನ ಮಾಡಿಸಿ ಬಡಿಸಿದರೆಂದು ತಿಳಿಸಿ, ಸದಾ ಕಾಲ ಊಟ ಅವರವರ ಇಚ್ಚೆಯಾಗಿದ್ದು, ಅದು ಪ್ರಶ್ನಾತೀತವೆಂದು ತಿಳಿಸಿದರು.
ವಾಲ್ಮೀಕಿ ರಚಿಸಿದ ರಾಮಾಯಣ ಮಹಾ ಗ್ರಂಥವು ಏಳು ಖಂಡಗಳೊಂದಿಗೆ ೨೪,೦೦೦ ಶ್ಲೋಕಗಳಿಂದ ಕೂಡಿದ್ದು ೩೯೦ ಭಾಷೆಗಳಲ್ಲಿ ಅದು ಭಾಷಾಂತರವಾಗಿ ರಚಿತವಾಗಿದೆ ಎಂದು ತಿಳಿಸಿ, ರಾಮ, ಲಕ್ಷ್ಮಣ, ಸೀತೆ ರವರುಗಳ ಆದರ್ಶ ಅವರ ಬದುಕು ಮೌಲ್ಯಯುತವಾಗಿ ಇತರರಿಗೆ ಸಂದೇಶ ನೀಡುವಂತಹದ್ದಾಗಿದ್ದು ಅದೇ ರೀತಿ ಬದುಕುವಂತಾಗಬೇಕೆಂದು ತಿಳಿಸಿದರು.
ರಾಮಾಯಣದಲ್ಲಿ ಸೀತೆಯ ತಂದೆ ತಾಯಿಯು ಯಾರೆಂಬುದು ತಿಳಿಯದಾಗಿದ್ದು ಆಕೆ ಹೇಗೆ ಹುಟ್ಟಿದ್ದಾಳೆಂಬುವ ಸತ್ಯ ಇಲ್ಲದಿದ್ದು ಜನಕರಾಜನಿಗೆ ಸಾಕು ಮಗಳಾಗಿರುತ್ತಾಳೆ. ಆದರೂ ಜಾತಿ ಧರ್ಮ ಮೀರಿ ಮಾನವತಾವಾದಿಯಾಗಿ ಸೀತೆ ಕಾಣಿಸಿಕೊಳ್ಳುತ್ತಾಳೆ ಎಂದು ತಿಳಿಸಿದರು.
ಚಲನಚಿತ್ರ ನಟ ಶಶಿಕುಮಾರ್ ರವರು ಮಾತನಾಡುತ್ತಾ, ಜನಾಂಗದಲ್ಲಿ ಒಗ್ಗಟ್ಟು ಅತಿ ಮುಖ್ಯವಾಗಿದ್ದು ಯಾರು ಯಾರಿಗೂ ಒತ್ತಾಸೆಯಾಗಿರುವುದಿಲ್ಲವೆಂದು, ನಮ್ಮ ಕಾಲ ಮೇಲೆ ನಾವು ನಿಲ್ಲುವಂತಹರಾಗಬೇಕೆಂದು, ಸಮಾಜಕ್ಕೆ ನಮ್ಮಿಂದ ಸಾಧ್ಯವಾಗುವ ಕಾಣಿಕೆ ನೀಡುವಂತವರಾಗಬೇಕೆಂದು ತಿಳಿಸಿದರು.
ಖಜಾಂಚಿ ರವೀಶ್‌ರವರು ಮಾತನಾಡಿ, ಜನಾಂಗದಲ್ಲಿ ಒಗ್ಗಟ್ಟು ಪ್ರಮುಖವಾಗಿದ್ದು, ಹೆಚ್ಚಿನ ಜನ ಭಾಗವಹಿಸದಿರುವ ಬಗ್ಗೆ ಖೇದ ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷರಾದ ವಿಮಲಾ ಬಸವರಾಜು ವಹಿಸಿದ್ದು, ಪುರಸಭಾ ಉಪಾಧ್ಯಕ್ಷರಾದ ಎಂ ಕೇಶವಪ್ಪ, ಸದಸ್ಯರಾದ ಎ.ಆರ್.ಹನೀಫುಲ್ಲ, ಮಂಜುಳಾ ಮುನಿರಾಜು, ಸುಷ್ಮಾ ಮಹೇಶ್, ಮಾಜಿ ಪುರಸಭಾ ಸದಸ್ಯ ಸಂಪತ್ ಕುಮಾರ್, ದೇವನಹಳ್ಳಿ ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ನಾಗೇಶ್ ಬಾಬು, ಮಾಜಿ ಅಧ್ಯಕ್ಷರಾದ ವೇಣುಗೋಪಾಲ್ ನಾಯಕ್, ಟೌನ್ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಮಟನ್ ಶ್ರೀರಾಮ್ ರವರು, ಗೌರವಾಧ್ಯಕ್ಷರಾದ ನಿವೃತ್ತ ಕೆಎಸ್‌ಆರ್ಟಿಸಿ ನೌಕರ ಪಿ ನಾರಾಯಣಸ್ವಾಮಿ, ಉಪಾಧ್ಯಕ್ಷರಾದ ಓಂ ಶಕ್ತಿ ಮುನಿಕೃಷ್ಣಪ್ಪ ರವರು, ಪ್ರಧಾನ ಕಾರ್ಯದರ್ಶಿ ಸಿಎಂ ರಾಮು, ಸಂಘಟನಾ ಕಾರ್ಯದರ್ಶಿ ಎಲೆ ಪಾಂಡುರಂಗ, ಮುಖಂಡರುಗಳಾದ ಎಲೆ ಮುನಿರಾಜು, ಮಟನ್ ರಮೇಶ್, ನಿವೃತ್ತ ಮುಖ್ಯೋಪಾಧ್ಯಾಯರಾದ ಕೆಎಚ್ ಚಂದ್ರಶೇಖರ್, ಹಾಗೂ ವಿಜಯಪುರ ಪಟ್ಟಣದ ಹಾಗೂ ದೇವನಹಳ್ಳಿ ತಾಲೂಕಿನ ವಾಲ್ಮೀಕಿ ನಾಯಕ ಸಂಘದ ಹಲವಾರು ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಶ್ರೀ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರವನ್ನು ಸಪ್ತಾಶ್ವಗಳ ರಥೋತ್ಸವದ ಮೂಲಕ ಪಟ್ಟಣದ ಮುಖ್ಯಬೀದಿಗಳಲ್ಲಿ ಮಹಿಳೆಯರ ಪೂರ್ಣ ಕುಂಭ, ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.