ಚನ್ನ ರೇಣುಕ ಬಸವ ಪ್ರಶಸ್ತಿಗೆ ಸಾಹಿತಿ ಡಾ. ಎಸ್.ಎಲ್ ಭೈರಪ್ಪ ಆಯ್ಕೆ
ಬಸವಕಲ್ಯಾಣ:ಸೆ.16: ತಾಲೂಕಿನ ಹಾರಕೂಡ ಸಂಸ್ಥಾನ ಹಿರೇಮಠದಿಂದ ಕೊಡ ಮಾಡುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿಯನ್ನು ನಾಡಿನ ಹಿರಿಯ ಸಾಹಿತಿ ಡಾ. ಎಸ್.ಎಲ್ ಭೈರಪ್ಪ ಅವರಿಗೆ ನೀಡಲಾಗುತ್ತಿದೆ ಎಂದು ಹಾರಕೂಡನ ಶ್ರೀ ಮಠದ ಪೀಠಾಧಿಪತಿ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ತಿಳಿಸಿದರು.
ಈ ಪ್ರಶಸ್ತಿಯು ಅಕ್ಟೋಬರ್ 11 ರಂದು ಶ್ರೀಮಠದಲ್ಲಿ ಜರುಗಲಿರುವ ಲಿಂ. ಶ್ರೀ ಗುರುಲಿಂಗ ಶಿವಾಚಾರ್ಯರ 55ನೇ ಪುಣ್ಯ ಸ್ಮರಣೋತ್ಸವ ಹಾಗೂ 38ನೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಡಾ. ಎಸ್.ಎಲ್ ಭೃರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಪ್ರಶಸ್ತಿಯ ಒಂದು ಲಕ್ಷ ರೂ ನಗದು ಹಾಗೂ ಎರಡು ತೊಲಾ ಚಿನ್ನದ ಪದಕ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ಶ್ರೀಗಳು ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಾಡಿನ ಮಹನಿಯರನ್ನು ಗುರುತಿಸಿ ಹಾರಕೂಡ ಶ್ರೀಮಠದಿಂದ ಪ್ರತಿವರ್ಷ ಶ್ರೀ ಚನ್ನ ರೇಣುಕ ಬಸವ ಪ್ರಶಸ್ತಿಯನ್ನು ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಕಲೆ, ಸಾಹಿತ್ಯ, ಸಂಗೀತ, ಭಾಷೆ, ಸಮಾಜ ಸೇವೆ, ಧಾರ್ಮಿಕ ಸೇವೆಗಳಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಕಳೆದ 2011ರಿಂದ ಪ್ರಾರಂಭವಾದ ಈ ಪ್ರಶಸ್ತಿಯನ್ನು ಡಾ. ಸಂಗಮೇಶ ಸವದತ್ತಿ ಮಠ ಧಾರವಾಡ, ಎಲ್.ಬಿ.ಕೆ ಅಲ್ದಾಳ, ಡಾ. ಪಂಚಾಕ್ಷರಿ ಹಿರೇಮಠ ಧಾರವಾಡ, ಪ್ರೊ ದೊಡ್ಡ ರಂಗೇಗೌಡರು, ಡಾ: ಎಂ.ಜಿ ನಾಗರಾಜ ಬೆಂಗಳೂರ, ಸಂಗೀತಾ ಕಟ್ಟಿ ಬೆಂಗಳೂರ, ಪ್ರೊ ಜೆ.ಎಸ್ ಖಂಡೇರಾವ ಕಲಬುರಗಿ, ಪಂಡಿತ ರಾಜಗುರು ಗುರುಸ್ವಾಮಿ ಕಲಕೇರಿ ಗದಗ, ಪೂಜ್ಯ ಗುರುಬಾಬಾ ಮಹಾರಾಜ ಔಸೇಕರ, ಕಲಬುರಗಿಯ ಪೂಜ್ಯ ಡಾ. ಶರಣಬಸವಪ್ಪಾ ಅಪ್ಪಾ ಹಾಗೂ ನಾಡೋಜ ಮನು ಬಳಿಗಾರ ಅವರನ್ನು ಇಲ್ಲಿಯವರೆಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು.