ದಾವಣಗೆರೆಯಲ್ಲಿ ಸಾಬೂನು ಮೇಳ ಆಯೋಜನೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೧೬: ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ದಾವಣಗೆರೆಯಲ್ಲಿ ಇಂದಿನಿಂದ  ಸೆಪ್ಟೆಂಬರ್ 25ರವರೆಗೆ 10ದಿನಗಳ ಕಾಲ ಸಾಬೂನು ಮೇಳ ಆಯೋಜಿಸಲಾಗಿದೆ ಎಂದು ಕೆಎಸ್ ಅಂಡ್ ಡಿಎಲ್ ಬೆಂಗಳೂರು ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಗುರುಪ್ರಸಾದ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯು ರಾಜ್ಯದ ಪ್ರಮುಖ ನಗರಗಳಲ್ಲಿ ಸೋಪ್ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ. ನಗರದ ಪಿ.ಬಿ.ರಸ್ತೆಯಲ್ಲಿರುವ ಶ್ರೀಮದ್ ಅಭಿನವ ರೇಣುಕಾ ಮಂದಿರದಲ್ಲಿ ಸಾಬೂನು ಮೇಳ ಆಯೋಜಿಸಲಾಗಿದೆ. ಸಂಸ್ಥೆಯು ಉತ್ಪಾದಿಸುತ್ತಿರುವ 48ಕ್ಕೂ ಹೆಚ್ಚು ಉತ್ಕೃಷ್ಟ ದರ್ಜೆಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಮೇಳದಲ್ಲಿ ಗ್ರಾಹಕರು ವಿಶೇಷ ರಿಯಾಯಿತಿ ದರದಲ್ಲಿ ತಮಗೆ ಬೇಕಾದ ಉತ್ಪನ್ನಗಳನ್ನು ಖರೀದಿಸಬಹುದು. ಕಾರ್ಯಕ್ರಮದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧ್ಯಕ್ಷರಾದ ಅಪ್ಪಾಜಿ ಸಿ.ಎಸ್. ನಾಡಗೌಡ, ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಪ್ರಶಾಂತ್, ಎಂ.ಗಂಗಪ್ಪ, ದಾವಣಗೆರೆ ಕ್ಷೇತ್ರದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೇರಿದಂತೆ ಇತರರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಸಂಸ್ಥೆಯ ಉತ್ಪನ್ನಗಳಾದ ಮೈಸೂರು ಸ್ಯಾಂಡಲ್ ಸಾಬೂನು, ಮೈಸೂರು ಸ್ಯಾಂಡಲ್ ಗಿಪ್ಟ್ ಪ್ಯಾಕ್, ಮೈಸೂರು ಸ್ಯಾಂಡಲ್ ಗೋಲ್ಡ್, ಮೈಸೂರು ಸ್ಯಾಂಡಲ್ ಗೋಲ್ಡ್ ಸಿಕ್ಸರ್, ಮೈಸೂರು ಸ್ಯಾಂಡಲ್ ಧೂಪ್, ಮೈಸೂರು ಸ್ಯಾಂಡಲ್ ಅಗರಬತ್ತಿಗಳು, ಮೈಸೂರು ಸ್ಯಾಂಡಲ್ ಹರ್ಬಲ್ ಹ್ಯಾಂಡ್‌ವಾಷ್, ಕ್ಲೀನಾಲ್, ಮೈಸೂರು ಸ್ಯಾಂಡಲ್ ಬೇಬಿ ಸಾಬೂನು, ಮೈಸೂರು ಸ್ಯಾಂಡಲ್ ಅಯಿಲ್, ಮೈಸೂರು ಸ್ಯಾಂಡಲ್ ಕಾರ್ಬೋಲಿಕ್ ಸಾಬೂನು, ಮೈಸೂರು ವಾಷಿಂಗ್ ಬಾರ್ ಸಾಬೂನು, ಮೈಸೂರು ಮಾರ್ಜಕ ಬಿಲ್ಲೆ, ಇವುಗಳು ಎಲ್ಲಾ ವರ್ಗಗಳ ಗ್ರಾಹಕರಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಂಜುನಾಥ್, ಸಿದ್ದನಾಯಕ್, ಗಂಗರಾಜ್, ವಿ.ಓ.ಕಾಮತ್ ಇತರರು ಇದ್ದರು.