ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದನೆ: 4 ಕೋಟಿ ರೂ.ಗಳ ಶಿಷ್ಯವೇತನ ಬಿಡುಗಡೆ: ಶರಣ್
ಕಲಬುರಗಿ:ಮಾ.01: ವೈದ್ಯಕೀಯ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯು ಗುರುವಾರ ಸುಮಾರು ನಾಲ್ಕು ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ಮೂಲಕ ಬೇಡಿಕೆಗಳಿಗೆ ಸ್ಪಂದಿಸಿದೆ ಎಂದು ಹಗರಣವನ್ನು ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ ಶರಣ್ ಐಟಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ಕಾಲೇಜಿನ ಮೇಲೆ ಶಿಷ್ಯವೇತನದ ಕುರಿತು ಆರೋಪಗಳನ್ನು ಮಾಡಿದ್ದೆ. ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶಿಷ್ಯವೇತನ ಕೊಡುತ್ತಿಲ್ಲ ಎಂದು ದೂರಿದ್ದೆ. ಪರಿಣಾಮ ಕಾಲೇಜಿನ ವಿದ್ಯಾರ್ಥಿಗಳು ಮೂರು ದಿನಗಳವರೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದರು ಎಂದರು.
ಕಳೆದ ನಾಲ್ಕು ತಿಂಗಳಿನಿಂದ ಬಾಕಿ ಇರುವ ಶಿಷ್ಯವೇತನ ಬಿಡುಗಡೆ ಮಾಡುವಂತೆ, ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ವೈದ್ಯಕೀಯ ಕಮೀಷನ್ ಪ್ರಕಾರ ಮೊದಲನೇ ಸಾಲಿನ ವಿದ್ಯಾರ್ಥಿಗಳಿಗೆ 45000ರೂ.ಗಳು, ಎರಡನೇ ಸಾಲಿನ ವಿದ್ಯಾರ್ಥಿಗಳಿಗೆ 50,000ರೂ.ಗಳು, ಮೂರನೇ ಸಾಲಿಗೆ 55000ರೂ.ಗಳನ್ನು ನೀಡುವಂತೆ ಆಗ್ರಹಿಸಿ ಕೈಗೊಂಡ ಹೋರಾಟಕ್ಕೆ ಆಡಳೀತ ಮಂಡಳಿಯು ಸ್ಪಂದಿಸಿದೆ ಎಂದು ಅವರು ಹೇಳಿದರು.
ಬೇಡಿಕೆಗಳಿಗೆ ಆಡಳಿತ ಮಂಡಳಿಯು ಒಪ್ಪಿ ಆದೇಶ ನೀಡಿದೆ. ಮಾರ್ಚ್ 1ರ ಪ್ರಕಾರ ವಿದ್ಯಾರ್ಥಿಗಳಿಗೆ ಅವರ ಖಾತೆಗಳಿಗೆ ಜಮಾ ಮಾಡಿದ್ದಾರೆ. ಇಲ್ಲಿಯವರೆಗೆ ಸುಮಾರು ನಾಲ್ಕು ಕೋಟಿ ರೂ.ಗಳನ್ನು ಶಿಷ್ಯವೇತನವನ್ನು ಬಿಡುಗಡೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೆ ಯಾವುದೇ ಒಂದು ಖಾಸಗಿ ವೈದ್ಯಕೀಯ ಕಾಲೇಜುಗಳು ಪಿಜಿ ವಿದ್ಯಾರ್ಥಿಗಳಿಗೆ ಪೂರ್ತಿ ಶಿಷ್ಯವೇತನ ಪಾವತಿಸುತ್ತಿಲ್ಲ. ಅದು ನನ್ನ ಗಮನಕ್ಕೆ ಬಂದಿದ್ದರಿಂದ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನವರ ವಿರುದ್ಧ ಹೋರಾಟ ಕೈಗೊಂಡು ಶಿಷ್ಯವೇತನ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಪೂರ್ತಿ ಹಣವನ್ನು ಸಂಸ್ಥೆ ಕೊಟ್ಟಿದೆ. ಇನ್ನು ಮುಂದೆ ರಾಜ್ಯದಲ್ಲಿನ ಎಲ್ಲ ಖಾಸಗಿ ಕಾಲೇಜುಗಳು ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜು ಮಾದರಿಯನ್ನು ಅನುಸರಿಸಿ ಅವರ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪಾವತಿಸಬೇಕು ಎಂದು ಅವರು ಒತ್ತಾಯಿಸಿದರು.