ಯುವ ಪತ್ರಕರ್ತರಿಗೆ ಗುರುರಾಜ ಕುಲಕರ್ಣಿ ಮಾದರಿ: ಡಿ.ಕೆ ಗಣಪತಿ
ಬೀದರ್:ಮಾ.1: ಗುರುರಾಜ ಕುಲಕರ್ಣಿ ಕೇವಲ ಓರ್ವ ಪತ್ರಕರ್ತರಷ್ಟೆ ಅಲ್ಲ, ಯುವ ಪತ್ರಕರ್ತರಿಗೆ ಮಾರ್ಗದರ್ಶಕರು ಹಾಗೂ ಮಾದರಿ ಪ್ರಾಯರಾಗಿದ್ದಾರೆ ಎಂದು ಕರ್ನಾಟಕ ಕಾರ್ಯನಿಎರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ ಗಣಪತಿ ಹೇಳಿದರು.
ಶುಕ್ರವಾರ ನಗರದ ಜ್ಯೋತಿ ಕಾಲೋನಿಯಲ್ಲಿರುವ ಗುರುರಾಜ ಕುಲಕರ್ಣಿ ನಿವಾಸದಲ್ಲಿ ಉಭಯ ದಂಪತಿಗಳಿಗೆ ಸನ್ಮಾನಿಸಿ ರಾಜ್ಯ ಸಂಘ ನೀಡಿದ ಚೆಕ್ ವಿತರಿಸಿ ಅವರು ಮಾತನಾಡಿದರು.
ಕಳೆದ 27 ವರ್ಷಗಳಿಂದ ಗುರುರಾಜ ಕುಲಕರ್ಣಿ ಬೆಂಗಳೂರು, ಮೈಸೂರು ಕಲಬುರಗಿ, ಬೀದರ್ ಸೇರಿದಂತೆ ರಾಜ್ಯದ ಹಲವು ಕಡೆ ಕಾರ್ಯನಿರ್ವಹಿಸಿ ಬದ್ದತೆ ಪ್ರದರ್ಶಿಸಿದ್ದಾರೆ. ಯಾರ ಹಂಗಿಗೂ ಒಳಗಾಗದೇ, ಯಾರ ಪರವಾಗಿ ನಿಲ್ಲದೇ ಜನರ ಧ್ವನಿಯಾಗಿ ನಿಂತು ಪತ್ರಿಕಾ ಧರ್ಮವನ್ನು ಪಾಲಿಸಿದ ಹೆಗ್ಗಳಿಕೆ ಕುಲಕರ್ಣಿ ಅವರಿಗೆ ಸಲ್ಲುತ್ತದೆ ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಡಿ.ಕೆ ಗಣಪತಿ ಅವರು ಅಧ್ಯಕ್ಷರಾದ ಬಳಿಕ ಸಂಘದ ಅಭಿವೃದ್ಧಿ ಪರ್ವ ಶುರುವಾಗಿದೆ. ಕಳೆದ 3 ದಶಕಗಳಿಂದ ಜಿಲ್ಲೆಗೆ ಒಂದು ಪ್ರಶಸ್ತಿ ಬಂದಿರಲಿಲ್ಲ. ಆದರೆ ಗಣಪತಿ ಅಧ್ಯಕ್ಷರಾದ ಬಳಿಕ ಪತ್ರಕರ್ತರಿಗೆ ಚುನಾವಣೆ ಸಂದರ್ಭದಲ್ಲಿ ಕಾರ್ಯಾಗಾರದಾದಿಯಾಗಿ ರಾಜ್ಯ ಸಮ್ಮೇಳನದಲ್ಲಿ ಜಿಲ್ಲೆಗೆ ಎರೆಡು ಪ್ರಶಸ್ತಿಗಳು ಲಭಿಸಿರುವುದು, ಈ ಹಿಂದೆ ನಾಲ್ಕೈದು ಪತ್ರಕರ್ತರನ್ನು ಸಮ್ಮೇಳನಕ್ಕೆ ಕರೆದೊಯ್ಯುವ ಪರಿಸ್ಥಿತಿ ಇತ್ತು. ಆದರೆ ಇತ್ತಿಚೀಗೆ ದಾವಣಗೆರೆಯಲ್ಲಿ ನಡೆದ ಪತ್ರಕರ್ತರ 38ನೇ ರಾಜ್ಯ ಸಮ್ಮೇಳನದಲ್ಲಿ ಬೀದರ್ ಜಿಲ್ಲೆಯಿಂದ 30ಕ್ಕೂ ಅಧಿಕ ಪತ್ರಕರ್ತರು ಭಾಗವಹಿಸಿ ಗಣಪತಿ ಅವರ ಸಾರಥ್ಯಕ್ಕೆ ಭೇಸ್ ಎಂದಿದ್ದಾರೆ. ಜಿಲ್ಲಾ ಸಂಘದ ಮನವಿ ಪುರಸ್ಕರಿಸಿ ಗುರುರಾಜ ಅವರಿಗೆ ತಗಡೂರು ಕಮಲಮ್ಮ ವಿರೇಶಗೌಡ ಪ್ರಶಸ್ತಿ ನೀಡಿದ ರಾಜ್ಯ ಸಂಘಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಗುರುರಾಜ ಕುಲಕರ್ಣಿಗೆ ರಾಜ್ಯ ಸಂಘ ಕೊಡ ಮಾಡಿದ ಚೆಕ್‍ನ್ನು ವಿತರಿಸಿ ಉಭಯ ದಂಪತಿಗಳಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಕಾಮಶೆಟ್ಟಿ ರಾಜ್ಯ ಸಂಘ ನೀಡಿದ ಅಭಿನಂದನಾ ಪತ್ರ ಓದಿದರು. ಪತ್ರಕರ್ತ ಮಹಾರುದ್ರ ಡಾಕುಳಗಿ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಜಿಲ್ಲಾ ಉಪಾದ್ಯಕ್ಷ ಶ್ರೀನಿವಾಸ ಚೌದ್ರಿ, ಕಾರ್ಯದರ್ಶಿ ಸುನಿಲ ಕುಲಕರ್ಣಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಗೋಪಿಚಂದ ತಾಂದಳೆ, ಸಂತೋಷ ಚಟ್ಟಿ, ಹಿರಿಯ ಪತ್ರಕರ್ತ ಚಂದ್ರಕಾಂತ ಪಾಟೀಲ, ಯೋಗೇಶ ಸೇರಿದಂತೆ ಹಲವರು ಸನ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.