ಪರವಾನಿಗೆ ಇಲ್ಲದೆ ನಡೆಸುತ್ತಿದ್ದ ಕ್ಲಿನಿಕ್ ಮೇಲೆ ದಾಳಿ: ಔಷಧಿ ಜಪ್ತಿ, ನೋಟಿಸ್ ಜಾರಿ
ಚಿಂಚೋಳಿ,ಮಾ.1-ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಪರವಾನಿಗೆ ಇಲ್ಲದೆ ಕ್ಲಿನಿಕ್ ನಡೆಸುತ್ತಿದ್ದ ಮಾಹಿತಿ ಮೇಲೆ ತಾಲ್ಲೂಕ ಆರೋಗ್ಯಾಧಿಕಾರಿ ಡಾ.ಮಹಮ್ಮದ್ ಗಫರ್ ಅವರು ಇಂದು ಕ್ಲಿನಿಕ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಣಮಂತ ಕನ್ನಳ್ಳಿ ಎಂಬುವವರು ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕ್ಲಿನಿಕ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಡಾ.ಗಫರ್ ಅವರು ಇಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಣಮಂತ ಕನ್ನಳ್ಳಿ ಅವರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹಣಮಂತ ಅವರ ಬಳಿ ಕ್ಲಿನಿಕ್ ನಡೆಸಲು ಯಾವುದೇ ಪರವಾನಿಗೆ ಇಲ್ಲದೇ ಇರುವುದನ್ನು ಮನಗಂಡು ಕ್ಲಿನಿಕ್ ಬಂದ್ ಮಾಡಿ ಕ್ಲಿನಿಕ್‍ನಲ್ಲಿದ್ದ ಔಷಧಿಗಳನ್ನು ವಶಪಡಿಸಿಕೊಂಡು ಹಣಮಂತ ಅವರಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹಣಮಂತ ಕನ್ನಳ್ಳಿ ಅವರು ಯಾವುದೇ ಪರವಾನಿಗೆ ಇಲ್ಲದೆ ಗ್ರಾಮದಲ್ಲಿ ಹಲವು ದಿನಗಳಿಂದ ಕ್ಲಿನಿಕ್ ನಡೆಸುತ್ತಿದ್ದು, ಅವರ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ಗ್ರಾಮದ ಮುಖಂಡರಾದ ರಾಜಕುಮಾರ ಕೊಳ್ಳೂರ್ ಆಗ್ರಹಿಸಿದ್ದಾರೆ.