ಹಗೆವು ಎಂಬ ದೇಸಿ ಧಾನ್ಯ ಸಂಗ್ರಹಾಗಾರ
ಕಲಬುರಗಿ: ಉತ್ತರ ಕರ್ನಾಟಕದ ಭಾಗದಲ್ಲಿ ನಮ್ಮ ಹಿಂದಿನವರು ಕೃಷಿಯಲ್ಲಿ ಜೋಳವನ್ನು ಪ್ರಧಾನಧಾನ್ಯವಾಗಿ ಬೆಳೆಯುತ್ತಿದ್ದರು. ಹೆಚ್ಚುವರಿ ಜೋಳ ಸಂಗ್ರಹಿಸಲು ಹಗೆ ( ಹಗೆವು) ನಿರ್ಮಿಸುತ್ತಿದ್ದರು.
ತೇವಾಂಶವಿಲ್ಲದ, ಗಟ್ಟಿಯಾದ ಭೂಮಿಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕ ಆಳ, ಒಳಗೆ ವಿಶಾಲ ಅಗಲವುಳ್ಳ, ಮೇಲ್ಭಾಗ ಒಬ್ಬ ಮನುಷ್ಯ ಸರಾಗವಾಗಿ ಇಳಿದು ಹತ್ತುವಷ್ಟು ಕಿಂಡಿಯುಳ್ಳ ಹಗೆಯನ್ನು ಸಿದ್ಧಪಡಿಸಿಕೊಂಡು ಹಗೆ ನಿರ್ಮಿಸುತ್ತಿದ್ದರು . ಸಗಣಿಯಿಂದ ಒಳಭಾಗ ಸಾರಿಸಿ ಸುತ್ತಲೂ ಜೋಳದ ಕಣಕಿಯಿಂದ ಹೊದಿಸಿ ನೆಲಕ್ಕೂ ಕಣಕಿ ಹಾಸಿ, ಅದರಲ್ಲಿ ತಮ್ಮ ಹೆಚ್ಚುವರಿ ಧಾನ್ಯ ಜೋಳವನ್ನು ವರ್ಷಾನುಗಟ್ಟಲೇ ಸಂಗ್ರಹಿಸಿಟ್ಟಿರುತ್ತಿದ್ದರು, ಕ್ರಿಮಿ ಕೀಟಗಳ ಬಾಧೆಯಿಲ್ಲದೆ, ಕಳ್ಳಕಾಕರ ಭಯವಿಲ್ಲದೇ ನೈಸರ್ಗಿಕವಾಗಿ ಅತ್ಯಂತ ಸುರಕ್ಷಿತವಾಗಿ ಸಂಗ್ರಹಿಸಿಡಬಹುದಾಗಿತ್ತು.
ತಮಗೆ ಅವಶ್ಯಕತೆ ಇದ್ದಾಗ ಧಾನ್ಯಗಳನ್ನು ಹೊರ ತಗೆಯುವ ಮುನ್ನ ಹಗೇವಿನ ಕಿಂಡಿಯ ಬಂಡೆಯ ಬಾಯಿ ತಗೆದು, ನಾಲ್ಕಾರು ತಾಸು ಬಿಡುತ್ತಿದ್ದರು. ಹೊರಗಿನ ಗಾಳಿ ಒಳಗೆ ಸೇರಿ ಸಹಜ ಸ್ಥಿತಿಗೆ ಮರಳುತ್ತಿತ್ತು. ಅದನ್ನು ಕಂಡು ಕೊಳ್ಳಲು ಅದರೊಳಗೆ ಕಂದೀಲು ದೀಪ ಹಗ್ಗಕ್ಕೆ ಕಟ್ಟಿ ಒಳಗೆ ಬಿಟ್ಟು, ಅದರ ಬೆಂಕಿ ನಂದದಿದ್ದರೆ ಒಳಗೆ ಇಳಿದು ಧಾನ್ಯ ತಗೆದುಕೊಳ್ಳುತ್ತಿದ್ದರು. ಕೃಷಿ ಭೂಮಿಯ ಆಧಾರದ ಮೇಲೆ ಒಂದೊಂದು ಮನೆಯ ರೈತರು ಒಂದರಿಂದ ಹಲವಾರು ಹಗೆಗಳನ್ನು ನಿರ್ಮಿಸಿರುತ್ತಿದ್ದರು.
ಈಗ ಸಾಮಾನ್ಯವಾಗಿ ಎಲ್ಲ ರೈತರೂ ವಾಣಿಜ್ಯ ಬೆಳೆಗಳಾದ ಹತ್ತಿ, ಸೇಂಗಾ, ಮೆಣಸಿನಕಾಯಿ ಕಬ್ಬು ತೊಗರಿ ಬೆಳೆ ಹೆಚ್ಚು ಬೆಳೆಯುವದರಿಂದ ಮನೆಗೆ ವರ್ಷಕ್ಕೆ ಬೇಕಾಗುವಷ್ಟು ಸ್ವಲ್ಪ ಜೋಳ ಬೆಳೆಯುವದರಿಂದ ಹಗೆಯ ಅವಶ್ಯಕತೆ ಇಲ್ಲದಂತಾಗಿದೆ. ಮೊದಲಿನ ಹಾಗೆ ಅವಿಭಕ್ತ ಕುಟುಂಬವು ಕಣ್ಮರೆಯಾಗುತ್ತಿವೆ.ಮೊದಲೆಲ್ಲಾ ಮನೆ ನಿರ್ಮಾಣ ಮಾಡುವಾಗ ಹಗೆ ನಿರ್ಮಿಸಿಯೇ ಮನೆ ನಿರ್ಮಿಸುತ್ತಿದ್ದರು ಕೆಲವರು ಮನೆಯಲ್ಲಿ ಹಗೆವು ನಿರ್ಮಿಸಲು ಸಾಧ್ಯವಾಗದಿದ್ದಲ್ಲಿ ಮನೆ ಮುಂದೆ ಅಥವಾ ರಸ್ತೆಯಲ್ಲೂ ನಿರ್ಮಿಸಿದ್ದುಂಟು.ಈಗ ರಸ್ತೆಗಳೆಲ್ಲ ಸಿ.ಸಿ.ರಸ್ತೆಗಳಾಗಿ ಮಾರ್ಪಟ್ಟಿವೆ. ಆಧುನಿಕತೆ ಭರಾಟೆಯಲ್ಲಿ ಎಲ್ಲವೂ ಮರೆತುಹೋಗಿದೆ.ಎಲ್ಲ ಹಗೆಗಳು ಮುಚ್ಚಿಹೋಗಿವೆ. ನಮ್ಮ ಮುಂಬರುವ ಪೀಳಿಗೆಗೆ ಹಗೆ ಎಂಬುದು ಚಿತ್ರದಲ್ಲಿ ತೋರಿಸಬೇಕಾಗಬಹುದು.