ಕೊಲೆ ಮಾಡಿ 13 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
ಕಲಬುರಗಿ,ಮಾ.1-ಜಿಲ್ಲೆಯ ಸೇಡಂ ತಾಲ್ಲೂಕಿನ ಎಲಿ ರಾಜೋಳ ಗ್ರಾಮದಲ್ಲಿ 2011ರಲ್ಲಿ ನಡೆದ ಇಬ್ಬರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 13 ವರ್ಷಗಳಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಸೇಡಂ ತಾಲ್ಲೂಕಿನ ರಾಜೋಳ (ಕೆ) ಗ್ರಾಮದ ಶರಣಪ್ಪ ತಂದೆ ಮೊಗಲಪ್ಪ ಜಕ್ಕನಕೇರಿ (48) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸ್‍ಪಿ ಅಕ್ಷಯ ಹಾಕೆ, ಹೆಚ್ಚುವರಿ ಎಸ್‍ಪಿ ಶ್ರೀನಿಧಿ, ಚಿಂಚೋಳಿ ಉಪ ವಿಭಾಗದ ಡಿವೈಎಸ್‍ಪಿ ಸಂಗಮನಾಥ ಎಸ್.ಹಿರೇಮಠ ಅವರ ಮಾರ್ಗದರ್ಶನದಲ್ಲಿ ಪಿಐ ದೌಲತ್ ಎನ್.ಕೆ.ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜಾಸಾಬ್, ಮಲ್ಲಿಕಾರ್ಜುನ, ಹುಸೇನ್ ಪಾಷಾ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹದಿಮೂರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್‍ಪಿ ಅಕ್ಷಯ ಹಾಕೆ ಅವರು ಶ್ಲಾಘಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಸೇಡಂ ತಾಲ್ಲೂಕಿನ ಎಲಿ ರಾಜೋಳ ಗ್ರಾಮದಲ್ಲಿ 13.4.2011 ರಂದು ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ 27 ಜನ ಸೇರಿ ರಾಜೋಳ (ಕೆ) ಗ್ರಾಮದ ಲಕ್ಷ್ಮಪ್ಪ ತಂದೆ ಚಿನ್ನಯ್ಯ (52) ಮತ್ತು ನರಸಪ್ಪ ತಂದೆ ಚಿನ್ನಯ್ಯ (55) ಎಂಬುವವರನ್ನು ಕೊಲೆ ಮಾಡಿದ್ದರು. ಈ ಸಂಬಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಆಗಿನ ತನಿಖಾಧಿಕಾರಿಯವರು 27 ಜನರ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸದ್ಯ ವಿಚಾರಣೆಯಲ್ಲಿದ್ದು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಲ್ಲಿ 6 ಜನರಿಗೆ ಜೀವಾವಧಿ ಶಿಕ್ಷೆ, 3 ಜನರಿಗೆ ಒಂದು ವರ್ಷ ಶಿಕ್ಷೆ ಹಾಗೂ 15000 ರೂ.ದಂಡ ವಿಧಿಸಿದ್ದು, ಉಳಿದ ಆರೋಪಿಗಳ ವಿರುದ್ಧ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಶರಣಪ್ಪ ತಂದೆ ಮೊಗಲಪ್ಪ ಜಕ್ಕನಕೇರಿ (48) ಪ್ರಕರಣ ದಾಖಲಾದಾಗಿನಿಂದ ಇಲ್ಲಿಯವರೆಗೆ ಅಂದರೆ ಕಳೆದ 13 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ 27.2-2024 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.