ಸಂಸದ ಉಮೇಶ್ ಜಾಧವ್ ಬೆಂಬಲಿಗ ಗಿರೀಶ್ ಚಕ್ರ ಬರ್ಬರ ಹತ್ಯೆ
ಕಲಬುರಗಿ,ಮಾ.1-ಸಂಸದ ಡಾ.ಉಮೇಶ್ ಜಾಧವ್ ಬೆಂಬಲಿಗನೂ ಆಗಿರುವ ಬಿಜೆಪಿ ಮುಖಂಡರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ನಡೆದಿದೆ.
ಗಿರೀಶ್ ಚಕ್ರ ಕೊಲೆಯಾದ ಬಿಜೆಪಿ ಮುಖಂಡ. ನಾಲ್ಕು ದಿನಗಳ ಹಿಂದೆಯಷ್ಟೇ ಬಿಎಸ್‍ಎನ್‍ಎಲ್ ಸಲಹಾ ಸಮಿತಿ ನಿರ್ದೇಶಕರನ್ನಾಗಿ ಗಿರೀಶ್ ಅವರನ್ನು ಸಂಸದ ಉಮೇಶ್ ಜಾಧವ್ ನೇಮಕ ಮಾಡಿದ್ದರು.
ಈ ಹಿನ್ನೆಲೆ ಪಾರ್ಟಿ ಕೊಡುವುದಾಗಿ ನಂಬಿಸಿ ಗಿರೀಶ್ ಚಕ್ರ ಅವರನ್ನು ಸ್ನೇಹಿತರೇ ಜಮೀನಿಗೆ ಕರೆಸಿದ್ದರು. ಅದರಂತೆ ಜಮೀನಿಗೆ ಬಂದ ಗಿರೀಶ್ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಎಸ್‍ಪಿ ಅಕ್ಷಯ ಹಾಕೆ, ನೂತನ ಡಿವೈಎಸ್‍ಪಿ ಮೊಹಮ್ಮದ್ ಶರೀಫ್ ರಾವುತರ್, ಸಿಪಿಐ ಚೆನ್ನಯ್ಯ ಹಿರೇಮಠ ಭೇಟಿ ನೀಡಿದ್ದಾರೆ. ಈ ಕೊಲೆಗೆ ಸಂಬಂಧಿಸಿದಂತೆ ಗಿರೀಶ್ ಚಕ್ರ ಅವರ ಸ್ನೇಹಿತ ಸಚಿನ್ ಹಾಗೂ ಇತರರ ವಿರುದ್ಧ ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.