ಕರ್ನಾಟಕ ಕಾನೂನು ಕಾಲೇಜಿನಲ್ಲಿ ಸಾಮಾಜಿಕ ನ್ಯಾಯದಿನ ಆಚರಣೆ
ಕಲಬುರಗಿ,ಮಾ.1: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯ ದಿನ ಆಚರಿಸಲಾಯಿತು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆಯವರು ಉದ್ಘಾಟಿಸಿದರು.ನಂತರ ಅವರು ಮಾತನಾಡಿ,ಸಾಮಾಜಿಕ ನ್ಯಾಯಕ್ಕಾಗಿ ಕಾನೂನು ಸೇವಾ ಪ್ರಾಧಿಕಾರ ನೊಂದ ಜನತೆಯ ಮನೆಬಾಗಿಲಿಗೆ ತರುವ ನಿಟ್ಟಿನಲ್ಲಿ ಉಚಿತವಾಗಿ ಪರಿಣಿತ ವಕೀಲರನ್ನು ನೇಮಿಸುವದರೊಂದಿಗೆ ಹಾಗೂ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಿಂದ ದೊಡ್ಡ ದೊಡ್ಡ ನಗರಗಳವರೆಗೆ ಆಯೋಜನೆ ಮಾಡುತ್ತಾ ಶ್ರಮಿಸುತ್ತಿದ್ದು. ನೊಂದವರು ಕಾನೂನು ಸೇವೆ ಪ್ರಾಧಿಕಾರದಿಂದ ಉಚಿತ ಸೇವೆಯನ್ನು ಪಡೆಯಬೇಕಾಗಿ ಕೋರಿದರು.ನ್ಯಾಯವಾದಿ ಹಾಗೂ ಮಹಾತ್ಮಗಾಂಧಿ ಗ್ರಾಹಕರ ಹಿತ ರಕ್ಷಣೆ ವೇದಿಕೆಯ ಕಾರ್ಯದರ್ಶಿ ವೈಜನಾಥ ಝಳಕಿ ಉಪನ್ಯಾಸಕರಾಗಿ ಆಗಮಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾನೂನು ಮಹಾವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಜೆ. ಜೋಷೆಫ್ ಅವರು ವಹಿಸಿದರು.
ನಿವೇದಿತಾ ಪಾಟೀಲ ನಿರೂಪಿಸಿದರು.ಶೀಲಾ ನೆಲ್ಲಗಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗದವರಾದ ಎಚ್ ಕೆ. ಕುನ್ನೂರ, ಜಾವೇದ್ ಇಶ್ರತ್, ಈರಮ್ಮ ಎಚ್ ಔರಾದ್, ಆಯಶಾ ಜಬೀನ್, ಅನುರಾಧಾ, ಶೃತಿ ಕಾಂದೆ, ರಾಜು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.