ಬಾಬು ಜಗಜೀವನ್ ರಾಮ ಭವನ ಶೀಘ್ರ ಪೂರ್ಣಗೊಳಿಸಿ
ಕಲಬುರಗಿ:ಮಾ.1: ನಗರದ ಪಿ ಆಯಿಂಡ ಟಿ ಕಾಲೋನಿಯಲ್ಲಿ ಅರ್ಧಕ್ಕೆ ನಿಂತಿರುವ ಬಾಬು ಜಗಜೀವನ್‍ರಾಮ ಭವನ ಪೂರ್ಣಗೊಳಿಸಬೇಕೆಂದು ಮಾದಿಗ ಸಮಾಜದ ಯುವ ಹೋರಾಟಗಾರ ರವಿ ಸಿಂಗೆ ಆಗ್ರಹಿಸಿದ್ದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಜಿಲ್ಲಾಮಟ್ಟದ ಬಾಬು ಜಗಜೀವನ್ ರಾಮ ಭವನ ನಿರ್ಮಾಣ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಬೇಕು. ಇಂತಹ ವಿಷಯದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು, ಆದರೆ ಈ ವಿಷಯದಲ್ಲಿ ಅಧಿಕಾರಿಗಳು ಏಕೆ ಮೌನ ವಹಿಸುತ್ತಿದ್ದಾರೆ ? ಎಂದು ಅವರು ಪ್ರಶ್ನಿಸಿದರು. ಕಾಮಗಾರಿಗಳು ಗುಣಮಟ್ಟದಿಂದ ಇರಬೇಕು,ನಿರ್ಮಾಣದ ಜವಬ್ದಾರಿ ವಹಿಸುತ್ತಿರುವ ಏಜೆನ್ಸಿಗಳು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ನಿಗಾವಹಿಸಬೇಕು. ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧೆಡೆ ಮಂಜೂರಾಗಿರುವ ಬಾಬು ಜಗಜೀವನರಾಮ ಭವನವನ್ನು ನಿಗದಿತ ಸಮಯದಲ್ಲಿ ನಿರ್ಮಾಣ ಮಾಡಬೇಕು. ಅಪೂರ್ಣಗೊಂಡಿರುವ ಭವನವನ್ನು ಸರ್ಕಾರದ ಮಾರ್ಗಸೂಚಿಯಂತೆ ಹಸ್ತಾಂತರ ಪ್ರಕ್ರಿಯೆ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಾಕಿ ಉಳಿದಿರುವ ಕಾಮಗಾರಿಗಳನ್ನು ಏಪ್ರಿಲ್ 5 ರ ಒಳಗಾಗಿ ಪೂರ್ಣಗೊಳಿಸುವಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಬೇಕು ಎಂದರು. ನಗರದ ಪಿ ಎನ್ ಟಿ ಕಾಲೋನಿಯಲ್ಲಿ ಅರ್ಧಕ್ಕೆ ನಿಂತಿರುವ ಡಾ.ಬಾಬು ಜಗಜೀವನರಾಮ ಭವನದ ಕಾಮಗಾರಿಯನ್ನು ಪರಿಶೀಲಿಸುವಂತೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಬೇಕು. ಕೂಡಲೇ ನಗರದಲ್ಲಿರುವ ಡಾ.ಬಾಬು ಜಗಜೀವನರಾಮ ಭವನವನ್ನು ಏಪ್ರಿಲ್ 5ರ ಒಳಗಾಗಿ ಆರಂಭಿಸಬೇಕು. ಒಂದು ವೇಳೆ ಅರ್ಧಕ್ಕೆ ನಿಂತಿರುವ ಕಾಮಗಾರಿ ಪೂರ್ಣಗೊಳಿಸದೇ ಹೋದಲ್ಲಿ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.