ಸದ್ಗುಣಕ್ಕೆ ಎಲ್ಲೆಡೆ ಗೌರವ: ಹಾವಗಿಲಿಂಗೇಶ್ವರ ಶ್ರೀ
ಬೀದರ್:ಮಾ.1:ಸದ್ಗುಣಕ್ಕೆ ಎಲ್ಲೆಡೆ ಗೌರವ ದೊರಕುತ್ತದೆ ಎಂದು ಹೈದರಾಬಾದ್-ಹಲಬರ್ಗಾ-ಶಿವಣಿ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ಹೈದರಾಬಾದನ ನಾಗಲಿಂಗೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಮಾಸಿಕ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಣ್ಣು, ಕಲ್ಲು, ಕಬ್ಬಿಣ, ತಾಮ್ರ, ಬೆಳ್ಳಿ, ಬಂಗಾರ ಸೇರಿ ಆರು ಗುಣಗಳು ಇರುತ್ತವೆ. ಮಣ್ಣು ಒಳ್ಳೆಯದು-ಕೆಟ್ಟದ್ದನ್ನು ತನ್ನ ಒಡಲೊಳಗೆ ಇರಿಸಿಕೊಳ್ಳುತ್ತದೆ. ಕಲ್ಲು ಯಾವುದನ್ನೂ ಸ್ವೀಕರಿಸದೆ, ಮರಳಿಸುತ್ತದೆ. ಕಬ್ಬಿಣವನ್ನು ಪ್ರಯಾಸಪಟ್ಟು ಬಾಗಿಸಬೇಕಾಗುತ್ತದೆ. ತಾಮ್ರ, ಬೆಳ್ಳಿ ಹೊಳಪು ಮಾಸಿ ಹೋಗುತ್ತದೆ. ಆದರೆ, ಬಂಗಾರ ಮಾತ್ರ ಸ್ಥಿರವಾಗಿ ಹೊಳೆಯುತ್ತಲೇ ಇರುತ್ತದೆ. ಸ್ವಂತಿಕೆಯನ್ನು ಬಿಡುವುದಿಲ್ಲ ಎಂದು ತಿಳಿಸಿದರು.
ಎಲ್ಲ ಗುಣಗಳಲ್ಲೇ ಬಂಗಾರದ ಗುಣ ಶ್ರೇಷ್ಠವಾಗಿದ್ದು, ಮನುಷ್ಯ ಅದನ್ನು ಮೈಗೂಡಿಸಿಕೊಳ್ಳಬೇಕು. ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ದೇವರ ಅನುಗ್ರಹಕ್ಕೆ ಪಾತ್ರರಾಗಲು ಸನ್ಮಾರ್ಗದಲ್ಲಿ ಸಾಗಬೇಕು. ಪೂಜೆ, ಜಪ, ತಪ, ಪರೋಪಕಾರದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಹೈದರಾಬಾದ್ ನಗರ ಘಟಕದ ಅಧ್ಯಕ್ಷ ಸಂಜು ಶೆಂಬೆಳ್ಳೆ ಉದ್ಘಾಟಿಸಿದರು. ಪ್ರಮುಖರಾದ ಶಿವು ಬಿರಾದಾರ, ರಾಜಕುಮಾರ ಪಾಟೀಲ, ಬಾಬುರಾವ್ ಗುಡ್ಡಾ, ಶಿವಾಜಿ ಬಿರಾದಾರ, ಶ್ರೀಕಾಂತ ಕುಡತೆ, ರವಿ ಪೂಜಾರಿ, ನಾಗರಾಜ ಸ್ವಾರಳ್ಳೆ, ರಘು ಕೃಷ್ಣಮೂರ್ತಿ ಮತ್ತಿತರರು ಇದ್ದರು.