ಬೀದರ್ ಲೋಕಸಭೆ ಟಿಕೆಟ್ ಮುಸಲ್ಮಾನ ಅಲ್ಪಸಂಖ್ಯಾತರಿಗೆ ಕೊಡಿ: ಸಲಾಮ್ ಪಾಶಾ
ಬೀದರ್:ಮಾ.1: ಬೀದರ್ ಲೋಕಸಭೆ ಕಾಂಗ್ರೆಸ್ ಟಿಕೆಟ್ ಮುಸಲ್ಮಾನ ಅಲ್ಪಸಂಖ್ಯಾತರಿಗೆ ಕೊಡಬೇಕೆಂದು ಕರ್ನಾಟಕ ಮುಸ್ಲಿಮ್ ಪಾಲಿಟಿಕಲ್ ಫೋರಂನ ಜಿಲ್ಲಾಧ್ಯಕ್ಷ ಸಯ್ಯದ್ ಸಲಾಮ್ ಪಾಶಾ ಒತ್ತಾಯಿಸಿದರು.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಈ ಹಿಂದೆ ಬೀದರ್ ಜಿಲ್ಲೆಯಿಂದ ಒಂದು ಬಾರಿ ಕಾಂಗ್ರೆಸ್ ಪಕ್ಷದಿಂದ ಸೌಕತ್ ಅಲಿ ಸಂಸದರಾಗಿದ್ದರು. ಹಿಂದೆ ಕಲಬುರಗಿ ಲೋಕಸಭೆ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿದ್ದರೂ ಜ್ಯಾತ್ಯಾತೀತ ಜನತಾ ದಳವು ಖಮರೂಲ್ ಇಸ್ಲಾಮ್ ಅವರಿಗೆ ಟಿಕೇಟ್ ನೀಡಿ ಗೆಲ್ಲಿಸಿಕೊಂಡು ಬಂದಿತು. ನಂತರ ಕಾಂಗ್ರೆಸ್ ಪಕ್ಷವು ಇಕ್ಲಾಲ್ ಅಹಮ್ಮದ್ ಸರಡಗಿ ಅವರಿಗೆ ಟಿಕೇಟ್ ನೀಡಿ ಗೆಲ್ಲಿಸಿತು. ಸರಡಗಿ ಎರಡು ಬಾರಿ ಕಲಬುರಗಿ ಕ್ಷೇತ್ರದ ಸಂಸದರಾಗಿದ್ದರು. ಈಗ ಕಲಬುರಗಿ ಎಸ್.ಸಿ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಮೊದಲು ಬೀದರ್ ಲೋಕಸಭೆ ಕ್ಷೇತ್ರ ಎಸ್.ಸಿ ಮೀಸಲು ಕ್ಷೇತ್ರವಾಗಿತ್ತು. ಈಗ ಸಾಮಾನ್ಯ ಕ್ಷೇತ್ರವಾಗಿದೆ. ಜಿಲ್ಲೆಯಲ್ಲಿ ನಾಲ್ಕು ಲಕ್ಷ ಮುಸಲ್ಮಾನ ಮತದಾರರಿದ್ದು, ಶೇಕಡಾ 88 ಪ್ರತಿಶತದಷ್ಟು ಮುಸ್ಲಿಮ್ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದರಿಂದ ಮುಸಲ್ಮಾನ ಬಾಂಧವರಿಗೆ ಈ ಬಾರಿಯ ಕಾಂಗ್ರೆಸ್ ಪಕ್ಷದ ಲೋಕಸಭೆ ಟಿಕೇಟ್ ನೀಡಬೇಕು, ಬಡಜನರ ಶ್ರಯೋಭಿವೃದ್ಧಿಗೆ ಸದಾ ಸಿದ್ದರಿರುವ ಶೈಕ್ಷಣಿಕ ಚಿಂತಕ ಅಯಾಜ್ ಖಾನ್ ಅವರು ಕಳೆದ ಎರಡು ದಶಕಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿರುವ ಕಾರಣ ಅವರಿಗೆ ಟಿಕೇಟ್ ನೀಡಬೇಕು, ಎಲ್ಲ ಸಮುದಾಯಗಳ ಜನರು ಜಾತಿ, ಮತ, ಪಂಥ, ಪಂಗಡ ಬದಿಗಿಟ್ಟು ಅವರನ್ನು ಗೆಲ್ಲಿಸುತ್ತಾರೆ ಎಂದು ತಿಳಿಸಿದರು.
ನಾವು ಈಗಾಗಲೇ ಕಾಂಗ್ರೆಸ್ ರಾಜ್ಯ ಸರ್ಕಾರಕ್ಕೆ ಹಾಗೂ ಕಾಂಗ್ರೆಸ್ ವರಿಷ್ಟರಿಗೆ ಕರ್ನಾಟಕ ಮುಸ್ಲಿಮ್ ಪಾಲಿಟಿಕಲ್ ಫೋರಂ ವತಿಯಿಂದ ಈ ಕುರಿತು ಮನವರಿಕೆ ಮಾಡಿದ್ದೇವೆ. ಬೆಂಗಳೂರು ನಗರ, ಹಾವೇರಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ ಕ್ಷೇತ್ರ ಮತ್ತು ಬೀದರ್ ಹೀಗೆ ಐದು ಕ್ಷೇತ್ರಗಳಲ್ಲಿ ಮುಸಲ್ಮಾನ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡುವಂತೆ ಮನವಿ ಮಾಡಲಾಗಿದ್ದು, ಅದರಲ್ಲಿ ಬೆಂಗಳೂರು ನಗರ, ಹಾವೇರಿ ಹಾಗೂ ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಮುಸಲ್ಮಾನ ಬಾಂಧವರಿಗೆ ಟೆಕೇಟ್ ನೀಡುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಆಯಾಜ್ ಖಾನ್ ಒಬ್ಬ ಒಳ್ಳೆಯ ನಿಷ್ಟಾವಂತ ಕಾಂಗ್ರೆಸ್ ಹಿರಿಯ ಮುಖಂಡ, ಎಲ್ಲ ಸಮುದಾಯಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಕಾರಣ ಟಿಕೇಟ್ ಕೊಟ್ಟರೆ ಅವರ ಗೆಲುವು ಖಂಡಿತ ಸಾಧ್ಯವಿದೆ ಎಂದು ಹೇಳಿದರು.
ಕಲಬುರಗಿಯ ಕರ್ನಾಟಕ ಮುಸ್ಲಿಮ್ ಪಾಲಿಟಿಕಲ್ ಫೋರಂ ಜಿಲ್ಲಾಧ್ಯಕ್ಷ ನ್ಯಾಯವಾದಿ ಜಬ್ಬಾರ್ ಗೋಲಾ ಮಾತನಾಡಿ, ಈ ಬಾರಿಯ ಚುನಾವಣೆ ಸೆಕ್ಯುಲರ್ ಹಾಗೂ ಕಮ್ಯುನಲ್ ಮಧ್ಯದ ಚುನಾವಣೆ ಇರುವ ಕಾರಣ. ಮುಸ್ಲಿಮ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದರೆ ಕೋಮುವಾದವನ್ನು ಈ ಸಾರಿ ಸೋಲಿಸಬಹುದಾಗಿದೆ. ಅಯಾಜ್ ಖಾನ್ ಒಬ್ಬ ವಿದ್ಯಾವಂತ ವ್ಯಕ್ತಿ, ಅದೆಷ್ಟೊ ಬಡ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ನೀಡಿ ಸಹಾಯ ಮಾಡುತ್ತಿರುವ ಇವರಿಗೆ ಟಿಕೇಟ್ ನೀಡಿದರೆ ನಾವು ಹಗಲು ರಾತ್ರಿ ಎನ್ನದೇ ಕೆಲಸ ಮಾಡಿ ಗೆಲ್ಲಿಸಿಕೊಂಡು ಬರುವುದಾಗಿ ಅವರು ಭರವಸೆ ನೀಡಿದರು.
ಕರ್ನಾಟಕ ಮುಸ್ಲಿಮ್ ಪಾಲಿಟಿಕಲ್ ಫೋರಂ ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಅಲಿಮೊದ್ದಿನ್, ಸದಸ್ಯರಾದ ಮೊಹಮ್ಮದ್ ಅಫ್ಜಲ್, ಹಜ್ ಸಮಿತಿ ಸದಸ್ಯ ಸಯ್ಯದ್ ಮನ್ಸೂರ್ ಅಹಮ್ಮದ್ ಖಾದ್ರಿ, ಅಂಬೇಡ್ಕರ್ ಯುವ ಸೇನೆ ರಾಜ್ಯಾಧ್ಯಕ್ಷ ರಾಜಕುಮಾರ ಗುನ್ನಳ್ಳಿ, ಕ್ರೈಸ್ತ ಸಮುದಾಯದ ಮುಖಂಡ ಸಂದೀಪ, ಕ್ರೈಸ್ತ ಸಮುದಾಯದ ಇನ್ನೋರ್ವ ಮುಖಂಡ ಯಸುದಾಸ, ಲಿಂಗಾಯತ ಸಮಾಜದ ಮಹೇಶ ಪಾಟೀಲ ಹಾಗೂ ಲೋಕೇಶ ಪಾಟೀಲ, ಸವಿತಾ ಸಮಾಜದ ಶಿವಕುಮಾರ ಸೇರಿದಂತೆ ಇತರರು ಪತ್ರಿಕಾ ಗೋಷ್ಟಿಯಲ್ಲಿದ್ದರು.