ಇಡೀ ತಿಂಗಳು ಮಹಿಳೆಯರಿಂದಲೇ ಯೋಗ ತರಬೇತಿ
ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.01: ಪತಂಜಲಿ ಯೋಗ ಸಮಿತಿಯ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಉಚಿತ ಯೋಗ ಶಿಬಿರದಲ್ಲಿ ವಿಶ್ವ ಮಹಿಳಾ ದಿನವನ್ನು ತಿಂಗಳ ಪೂರ್ತಿ ಮಹಿಳೆಯರಿಗೆ ಗೌರವ ನೀಡುವ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದ್ದು, ತಿಂಗಳುದ್ದಕ್ಕೂ ಮಹಿಳೆಯರೇ ಯೋಗ ತರಬೇತಿ ನೀಡಲಿದ್ದಾರೆ.
ಹೊಸಪೇಟೆಯಲ್ಲಿ 20ಕ್ಕೂ ಅಧಿಕ ನುರಿತ ಮಹಿಳಾ ಯೋಗ ಶಿಕ್ಷಕರಿದ್ದು, ಪ್ರತಿ ದಿನ ಒಬ್ಬರಂತೆ ಇಲ್ಲಿಗೆ ಬಂದು ಯೋಗ ತರಬೇತಿ ನೀಡಲು ಒಪ್ಪಿಕೊಂಡಿದ್ದಾರೆ. ಅದರಂತೆ ಶುಕ್ರವಾರ ಮೊದಲ ಕಾರ್ಯಕ್ರಮದ ರೂಪದಲ್ಲಿ ಹಿರಿಯ ಯೋಗ ಸಾಧಕಿ ಉಮಾ ವಿಶ್ವನಾಥ್‌ ಅವರು ಯೋಗ ತರಬೇತಿ ನಡೆಸಿಕೊಟ್ಟರು.
ಮನೆಗೆಲಸದಲ್ಲಿ ಇರುವ ಮಹಿಳೆಯರಿಗೆ ಸೊಂಟ ನೋವು, ಮಂಡಿ ನೋವು, ಭುಜದ ನೋವು ಸಹಜ. ಯೋಗದಲ್ಲಿ ಅದನ್ನು ಹೇಗೆ ಸುಲಭವಾಗಿ ನಿವಾರಿಸಿಕೊಳ್ಳಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು. ಸನಾತನ ಸಂಸ್ಕೃತಿಯಲ್ಲಿ ಮಹಿಳೆಯ ಪಾತ್ರ, ಮನೆಗೆಲಸ ಅದರಲ್ಲೂ ಮಕ್ಕಳನ್ನು ಪೋಷಿಸುವ, ಬೆಳೆಸುವಲ್ಲಿ ಮಹಿಳೆ ವಹಿಸಬೇಕಾದ ಹೊಣೆಗಾರಿಕೆಗಳ ಬಗ್ಗೆ ಸಲಹೆ ನೀಡಿದ ಅವರು, ವಿದೇಶಗಳಲ್ಲಿ ಭಾರತೀಯ ಮೂಲದ ಮಹಿಳೆಯರು ಇಲ್ಲಿಗಿಂತಲೂ ಹೆಚ್ಚು ಕಷ್ಟಪಟ್ಟು ಜೀವನ ಸಾಗಿಸುತ್ತಿರುವುದನ್ನು ಆಸ್ಟ್ರೇಲಿಯಾದಲ್ಲಿರುವ ತಮ್ಮ ಸೊಸೆಯ ಉದಾಹರಣೆ ನೀಡಿ ಮನವರಿಕೆ ಮಾಡಿದರು.
ಹೇಗಿರುತ್ತದೆ ಕಾರ್ಯಕ್ರಮ: ಪತಂಜಲಿ ಯೋಗ ಪ್ಯಾಕೇಜ್‌ನಲ್ಲಿ ಆರಂಭದಲ್ಲಿ ಸ್ವಾಗತ, ಯೋಗ ಕಕ್ಷೆ, ಸಹ ಮಾರ್ಗದರ್ಶನ, ಭಜನೆ, ಹಾಸ್ಯಾಸನ, ವಂದನಾರ್ಪಣೆ ಎಂಬ ಪ್ರಮುಖ ವಿಭಾಗಗಳಿವೆ. ಅವುಗಳೆಲ್ಲವನ್ನು ಒಂದು ತಿಂಗಳ ಕಾಲ ಮಹಿಳೆಯರೇ ನಡೆಸುವುದು ಈ ಕಾರ್ಯಕ್ರಮದ ವಿಶೇಷ.
ಹೊಸಪೇಟೆಯಲ್ಲಿ ಈ ಹಿಂದೆ ಒಂದು ದಿನ ಮಾತ್ರ ಪೂರ್ತಿ ಮಹಿಳೆಯರೇ ಯೋಗಕಕ್ಷೆ ನಡೆಸಿದ ನಿದರ್ಶನ ಇತ್ತು. ಅನಂತ ಜೋಷಿ, ಶ್ರೀರಾಮ್‌, ಚಂದ್ರಿಕಾ ಅವರ ಉಸ್ತುವಾರಿಯಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ಉದ್ಯಾನದ ಉಚಿತ ಯೋಗ ಶಿಬಿರ ಇದೀಗ ಹೊಸ ಸಾಹಸಕ್ಕೆ ಕೈಹಾಕಿದ್ದು, ಮಹಿಳಾ ಸಬಲೀಕರಣಕ್ಕೆ ತನ್ನದೇ ಆದ ಕೊಡುಗೆ ನೀಡಲು ಮುಂದಾಗಿದೆ.