ಜಗದ ಸೌಂದರ್ಯಕ್ಕೆ ಮನಷ್ಯತ್ವ ಮುಖ್ಯ
ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.01: ಮಾನವನಲ್ಲಿರುವ ಮೃಗತ್ವವನ್ನು ಬದಿಗಿಟ್ಟು ಮನುಷ್ಯತ್ವ ಬೆಳೆಸಿಕೊಂಡಾಗ: ಈ ಜಗತ್ತು ಸುಂದರವಾಗಿ ಕಾಣುತ್ತದೆ. ಹಾಗಾಗಿ ನಾವು ಉತ್ತಮ ದೇಶ ನಿರ್ಮಾಣಕ್ಕಾಗಿ ಗೌತಮ ಬುದ್ಧ, ವಿಶ್ವಗುರು ಬಸವಣ್ಣ, ಶ್ರೀಸೇವಾಲಾಲ್‌ ಮಹಾರಾಜ್‌ ಮತ್ತು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ರಾಜ್ಯಾಧ್ಯಕ್ಷೆ ಬಿ.ಟಿ. ಲಲಿತಾ ನಾಯ್ಕ ಹೇಳಿದರು.
ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ವಿಜಯನಗರ ಜಿಲ್ಲಾ ಘಟಕ ಹಾಗೂ ತಾಂಡಾ ಅಭಿವೃದ್ಧಿ ನಿಗಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಗುರುವಾರ ನಡೆದ ಶ್ರೀಸಂತ ಸೇವಾಲಾಲ್‌ ಮಹಾರಾಜರ 285ನೇ ಜಯಂತ್ಯುತ್ಸವ ಹಾಗೂ ಬಂಜಾರ (ಲಂಬಾಣಿ) ಸಮಾಜದ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀ ಸೇವಾಲಾಲ್‌ ಅವರು ಬಂಜಾರರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ಮುನ್ನಡೆಯುತ್ತೀದ್ದೇವೆ. ಬಂಜಾರ ಸಮಾಜ ಎಲ್ಲಾ ರಂಗಗಳಲ್ಲಿ ಮುಂದುವರೆಯಲು ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನದ ಕೃಪೆಯೂ ಇದೆ. ಹಾಗಾಗಿ ನಾವು ಶ್ರೀಸೇವಾಲಾಲ್‌ ಅವರಷ್ಟೇ, ಬಾಬಾ ಸಾಹೇಬ್‌ ಅವರಿಗೂ ಗೌರವ, ಪೂಜ್ಯ ಭಾವನೆಯಿಂದ ಕಾಣುತ್ತೇವೆ ಎಂದರು.
ವಿಶ್ವಗುರು ಬಸವಣ್ಣನವರು ಪ್ರಸಾದದ ಮಹತ್ವ ಸಾರಿದ್ದಾರೆ. ಕಾಯಕದ ಮಹತ್ವ ತಿಳಿಸಿದ್ದಾರೆ. ಹಾಗೆಯೇ ಶ್ರೀಸೇವಾಲಾಲ್‌ ಅವರು ಕೂಡ ಕಾಯಕದಿಂದ ಬದುಕು ಕಟ್ಟಿಕೊಳ್ಳುವುದನ್ನು ತಿಳಿಯಪಡಿಸಿದ್ದಾರೆ. ನಾವು ಬರೀ ಪೂಜೆಗೆ ಸೀಮಿತಗೊಳ್ಳದೇ ಭಕ್ತಿಯ ಜೊತೆಗೆ ಜೊತೆಗೆ ಕಾಯಕವನ್ನು ಮಾಡಬೇಕು. ಕಾಯಕದಿಂದ ದೇಶ ಉದ್ಧಾರವಾಗಲಿದೆ. ಬರೀ ಪೂಜೆಯಿಂದ ದೇಶ ಉದ್ಧಾರ ಆಗಲ್ಲ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.
ಈ ಭಾಗದಲ್ಲಿ ಗುಳೆ ಹೋಗುವವರ ಮಕ್ಕಳಿಗಾಗಿ ಶ್ರೀ ಶಿವಪ್ರಕಾಶ ಮಹಾರಾಜ ಅವರು ಹಾಸ್ಟೆಲ್ ನಿರ್ಮಾಣ ಮಾಡುತ್ತೇವೆ ಎಂದು ಹೊರಟಿದ್ದಾರೆ. ಇದು ಉತ್ತಮ ಕಾರ್ಯವಾಗಿದೆ. ನಾವು ಮಕ್ಕಳಿಗೆ ಶಿಕ್ಷಣ ನೀಡಿದಾಗ ಮಾತ್ರ ದೇಶ ಉದ್ಧಾರ ಆಗಲು ಸಾಧ್ಯ. ದಾವಣಗೆರೆಯ ಸೂರಗೊಂಡನಕೊಪ್ಪದಲ್ಲಿ ಬರೀ ಪೂಜಾರಿಗಳೇ ಹೆಚ್ಚಾಗಿದ್ದಾರೆ. ಭಕ್ತಿಯ ಜೊತೆಗೆ ವಿದ್ಯೆಯೂ ದೊರೆಯಬೇಕು. ಈ ಕಾರ್ಯವನ್ನು ನಾವು ಮಾಡಬೇಕು ಎಂದರು.
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕೃಷಿಕರಿಗೂ ಮಹತ್ವ ನೀಡುವ ಕೆಲಸ ಆಗಬೇಕು. ಈ ಜಗತ್ತಿನಲ್ಲಿ ಎಲ್ಲರೂ ಸಮಾನರು ಎಂದು ಮಹನೀಯರು ಸಾರಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು ಎಂದರು.
ಶಾಸಕರು, ಮಂತ್ರಿಗಳು ಜನ ಸೇವಕರಾಗಿದ್ದಾರೆ. ಇವರು ರಾಜರು ಎಂದು ಭಾವಿಸಿಕೊಳ್ಳಬಾರದು. ದಿನದ 24 ತಾಸೂ ಕೆಲಸ ಮಾಡಬೇಕು. ಗೆದ್ದ ಬಳಿಕ ಜನರ ಕೆಲಸ ಮಾಡದೇ ಹೋದರೆ ಅವರು ಶಾಸಕರು, ಮಂತ್ರಿಗಳು ಎನಿಸಿಕೊಳ್ಳಲ್ಲ. ಜನ ಕಲ್ಯಾಣವೇ ಜನಪ್ರತಿನಿಧಿಗಳಿಗೆ ಮುಖ್ಯ ಎಂದು ಹೇಳಿದರು.
ಕೊಟ್ಟೂರಿನ ಬಂಜಾರ ಶ್ರೀಪೀಠದ ಶ್ರೀ ಶಿವಪ್ರಕಾಶ ಮಹಾರಾಜ, ರಾಮಕೃಷ್ಣ ಆಶ್ರಮ ರಾರಾಳ ತಾಂಡಾದ ಶ್ರೀ ವಿಷ್ಣುಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಘದ ಜಿಲ್ಲಾಧ್ಯಕ್ಷ ಡಿ. ಲಾಲ್ಯಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷ ಮಧುನಾಯ್ಕ ಲಂಬಾಣಿ ಶ್ರೀಸೇವಾಲಾಲ್‌ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಗಾಯಕರಾದ ಸಾವಿತ್ರಿಬಾಯಿ, ಉಮೇಶ್‌ ನಾಯ್ಕ, ವಾಲ್ಯಾ ನಾಯ್ಕ, ಯಲ್ಲಪ್ಪ ಭಂಡಾರಧಾರ್‌, ಮುಖಂಡರಾದ ಡಿ. ವೆಂಕಟರಮಣ, ಪಂಪಾಪತಿ, ರಾಮಜೀ ನಾಯ್ಕ, ಕುಮಾರ ನಾಯ್ಕ, ಹನುಮನಾಯ್ಕ, ಹೀರ್ಯಾ ನಾಯ್ಕ, ರಾಮ ನಾಯ್ಕ, ಗಜಾನಂದ ನಾಯ್ಕ, ಪೂಜಾರಿ ಗೋವಿಂದ ನಾಯ್ಕ ಇತರರು ಪಾಲ್ಗೊಂಡಿದ್ದರು.
ಶಿಕ್ಷಕ ಎಲ್‌. ಹಾಲ್ಯಾ ನಾಯ್ಕ, ನಾಗರತ್ನಾ  ನಿರ್ವಹಿಸಿದರು.
ಮೆರವಣಿಗೆ:
ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇಗುಲದಿಂದ ಶ್ರೀಸೇವಾಲಾಲ್‌ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಬಂಜಾರ ಹಾಡುಗಳಿಗೆ ಯುವಕರು, ಯುವತಿಯರು ಕುಣಿದು ಕುಪ್ಪಳಿಸಿದರು. ಉಟೇ, ಉಟೇ ಸುಶೀಲಾ ಬೋಡಿ, ನಾಚರಿಚ ಛೋರಿ ನಾಚರಿಚ ಸೇರಿದಂತೆ ಸೇವಾಲಾಲ್‌ ಮಹಾರಾಜರ ಕುರಿತ ಹಾಡುಗಳಿಗೆ ಹೆಜ್ಜೆ ಹಾಕಿದರು. ಗೌರಿ ಸಸಿಯೊಂದಿಗೆ ಯುವತಿಯರು ಮೆರವಣಿಗೆಯಲ್ಲಿ ಸಾಗಿದರು.