ಕಾನೂನುಗಳ ಅರಿವು ಅತಿ ಮುಖ್ಯ-ನ್ಯಾಯಾಧೀಶ ಸುನೀಲ್
ಕೋಲಾರ,ಮಾ.೧- ಮನುಷ್ಯನ ಜೀವನ ನಿರ್ವಹಣೆಗೆ ನೀರು,ಆಹಾರದಷ್ಟೇ ಕಾನೂನು ಅರಿವು ಅತಿ ಮುಖ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಸುನೀಲ್ ಎಸ್.ಹೊಸಮನಿ ಕರೆ ನೀಡಿದರು.
ಮುಳಬಾಗಿಲು ತಾಲ್ಲೂಕಿನ ನಂಗಲಿ ಆರ್.ಎಂ.ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕಾನೂನಿನ ಅರಿವಿಲ್ಲದೇ ಅಪರಾಧ ಮಾಡಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ನಿತ್ಯ ಜೀವನದಲ್ಲಿ ಅಗತ್ಯವಾದ ಕಾನೂನುಗಳ ಅರಿವು ಇದ್ದರೆ ನೆಮ್ಮದಿಯ ವಿವಾದ ರಹಿತ ಜೀವನ ನಡೆಸಬಹುದು ಎಂದರು.
ಮೋಟರ್ ವಾಹನ ಕಾಯಿದೆ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿದ ಅವರು, ನಿಮಗೆ ೧೮ ವರ್ಷವಾಗಿ ನೀವು ವಾಹನ ಚಾಲನಾ ಪರವಾನಗಿ ಪಡೆಯುವವರೆಗೂ ವಾಹನ ಚಾಲನೆ ಮಾಡುವುದು ಅಪರಾಧವಾಗುತ್ತದೆ ಎಂದು ತಿಳಿಸಿ, ನೀವು ವಾಹನ ಚಲಾಯಿಸಿ ಅಪಘಾತ ನಡೆಸಿದರೆ ಅದು ನಿಮ್ಮ ಪೋಷಕರಿಗೂ ಸಮಸ್ಯೆಯಾಗಿ ಕಾಡುತ್ತದೆ ಎಂದು ಎಚ್ಚರಿಸಿ, ವ್ಹೀಲಿಂಗ್ ಮಾಡುವುದು ಅಪರಾಧವಾಗಿದೆ, ಇದರಿಂದ ಶಿಕ್ಷೆಯ ಜತೆಗೆ ಜೀವಕ್ಕೂ ಹಾನಿ ಎಂದು ಎಚ್ಚರಿಸಿದರು.
ಬಾಲ್ಯವಿವಾಹ ಸಮಾಜಕ್ಕೆ ಕಂಟಕವಾಗಿದೆ ಎಂದ ಅವರು ಇದರ ಸಂಪೂರ್ಣ ತಡೆಗೆ ವಿದ್ಯಾರ್ಥಿ ಸಯುದಾಯದ ಸಹಕಾರ ಅಗತ್ಯವಿದೆ, ನಿಮ್ಮ ಸ್ನೇಹಿತರಿಗೆ ಬಾಲ್ಯವಿವಾಹ ಆಗುತ್ತಿದ್ದರೆ ನೀವು ಕೂಡಲೇ ೧೦೯೮ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು, ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.
ಓದುವ ವಯಸ್ಸಿನಲ್ಲಿ ಸಂಸಾರ ಬಂಧನಕ್ಕೆ ಒಳಪಡಿಸುವುದು ಅಪರಾಧವಾಗಿದ್ದು, ಮದುವೆ ಮಾಡಿಸಿದ ಪುರೋಹಿತರೂ ಸೇರಿದಂತೆ ಛತ್ರ ನೀಡಿದವರಿಗೂ,ಮದುವೆಗೆ ಹೋದವರ ಮೇಲೂ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ತಿಳಿಸಿ, ನಿಮ್ಮ ಪೋಷಕರಿಗೆ ಈ ಕುರಿತು ಅರಿವು ನೀಡಿ ಎಂದು ಕಿವಿಮಾತು ಹೇಳಿದರು.
ಬೆಂಗಳೂರಿನ ಸಾಮಾಜಿಕ ಹೊಣೆಗಾರಿಕೆ ಸಂಸ್ಥೆ ನಿರ್ದೇಶಕ ಕಾಶಿನಾಥಪ್ರಭು ಉಪನ್ಯಾಸ ನೀಡಿ, ಸಂವಿಧಾನ ಶಿಕ್ಷಣದ ಹಕ್ಕು ನೀಡಿದೆ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಸಂವಿಧಾನದ ಉದ್ದೇಶವಾಗಿದೆ ಎಂದ ಅವರು, ಶಾಲೆಗೆ ಗೈರಾಗಿ ದುಡಿಮೆ ಮಾಡುತ್ತಿದ್ದರೆ ಕೂಡಲೇ ನಿಮ್ಮ ಶಿಕ್ಷಕರಿಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ರಾಘವೇಂದ್ರ, ಮುಖ್ಯಶಿಕ್ಷಕಿ ಜುಲಿಯೇಟ್ ಹೇಮಲತಾ ಸೇರಿದಂತೆ ಶಿಕ್ಷಕರು, ೬೦೦ ವಿದ್ಯಾರ್ಥಿಗಳು,ಪೋಷಕರು ಹಾಜರಿದ್ದರು.