ಜನಸಾಮಾನ್ಯರಿಂದ ವಿಜ್ಞಾನದ ಅರಿವು
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.01: ಜನಸಾಮಾನ್ಯರಿಗೆ ವಿಜ್ಞಾನದ ಅರಿವು ಮೂಡಿಸುವುದು ಮತ್ತು ಸಾಮಾನ್ಯ ಜನತೆಯಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಹೊಂದಿರುವ ವ್ಯಕ್ತಿಯನ್ನು ಗುರುತಿಸಿ ಅವರ ಜ್ಞಾನಕ್ಕೆ ವೇದಿಕೆ ಕಲ್ಪಿಸುವ ವಿನೂತನ ಪ್ರಯೋಗವು ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಆಯೋಜಿಸಲಾಗಿತ್ತು.
ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಜಿಲ್ಲೆಯ ಮಲ್ಲಯ್ಯ ಎಂಬ ವ್ಯಕ್ತಿಯನ್ನು ವಿಭಾಗಕ್ಕೆ ಆಹ್ವಾನಿಸಿ ಅವರಲ್ಲಿ ಅಡಗಿರುವ ವಿಜ್ಞಾನ ಕ್ಷೇತ್ರದ ಕೌತುಕಗಳ ಕುರಿತು ವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ಆಯಾಮಗಳಲ್ಲಿ ಮಾಹಿತಿ ವಿನಿಯೋಗ ನಡೆಸಿದರು. ಶಾಲಾ ಮಟ್ಟದ ಶಿಕ್ಷಣ ಮಾತ್ರ ಪೂರೈಸಿರುವ ಮಲ್ಲಯ್ಯ ಅವರು ಖಗೋಳ ವಿಜ್ಞಾನ ಕುರಿತು ತಮ್ಮಲ್ಲಿರುವ ವಿಸ್ಮಯಕಾರಿ ವಿಷಯಗಳ ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಪ್ರಸ್ತುತ ದಿನಗಳಲ್ಲಿ ವಿಜ್ಞಾನದ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸುವುದು, ವಿಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆ ಮತ್ತು ಪ್ರತಿನಿತ್ಯವೂ ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ನ್ಯಾನೊಮಟಿರಿಯಲ್ಸ್ ಆ್ಯಂಡ್ ಇಟ್ಸ್ ಅಪ್ಲಿಕೇಶನ್ಸ್‍ನ ಇತ್ತೀಚಿನ ಆಯಾಮಗಳ ಕುರಿತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಅರುಣಕುಮಾರ ಲಗಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಇತ್ತೀಚೆಗೆ ಜರುಗಿದ್ದ ‘ಪೋಸ್ಟರ್ ಪ್ರದರ್ಶನ’ದಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ತಿಪ್ಪೇರುದ್ರಪ್ಪ, ಪ್ರೊ. ಖಡ್ಕೆ ಉದಯಕುಮಾರ್, ಸಹಾಯಕ ಪಾಧ್ಯಾಪಕರಾದ ಡಾ. ಕೊಟ್ರೇಶ್ ಎಮ್ ಜಿ. ಡಾ. ಅವಿನಾಶ ಹಾಗೂ ಸಿಬ್ಬಂದಿ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಇದ್ದರು.