ಲೋಕಸಭೆಗೆ ಬಲಗೈ ಸಮುದಾಯಕೆ ಟಿಕೆಟ್ ನೀಡಲು ಅಗ್ರಹ
ಕೋಲಾರ,ಮಾ.೧- ಕೋಲಾರ ಲೋಕಸಭಾ ಚುನಾವಣೆಯ ಮೀಸಲು ಕ್ಷೇತ್ರದಲ್ಲಿ ೨೦೨೪ರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಬಲಗೈನ ಚಿಕ್ಕತಾಳಿ ಸಮುದಾಯದವರಿಗೆ ಕಾಂಗ್ರೇಸ್ ಪಕ್ಷವು ಟಿಕೆಟ್ ನೀಡ ಬೇಕೆಂದು ಒತ್ತಾಯಿಸಿ ಪರಿಶಿಷ್ಟಜಾತಿ ಬಲಗೈ ರೇಣುಕ ಯಲ್ಲಮ್ಮ ದೇವಿ ಸಮುದಾಯದ ಧ್ವನಿ ನಿಯೋಗವು ಕೆ.ಪಿ.ಸಿ.ಸಿ. ಅಧ್ಯಕ್ಷರ ಮೂಲಕ ಎ.ಐ.ಸಿ.ಸಿ.ಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಮುಖಂಡ ರಾಮಚಂದ್ರ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಸ್ವಾತಂತ್ರ್ಯದ ನಂತರದಿಂದಲೂ ಬಲಗೈ ಸಮುದಾಯವು ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿ ಕೊಂಡು ಬೆಂಬಲಿಸುತ್ತಾ ಬರುತ್ತಿದೆ. ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯವು ೪,೫ ಲಕ್ಷ ಮಂದಿ ಮತದಾರರಿದ್ದಾರೆ ಈ ಪೈಕಿ ಶೇ ೭೫ ರಷ್ಟು ಮತದಾರರು ಚಿಕ್ಕತಾಳಿಯ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅದರೆ ಈ ಸಮುದಾಯವು ರಾಜಕೀಯವಾಗಿ ,ಶೈಕ್ಷಣಿಕವಾಗಿ ಹಾಗೂ ಅರ್ಥಿಕವಾಗಿ ಹಿಂದುಳಿದಿದ್ದು ಕೇವಲ ಚುನಾವಣೆಯಲ್ಲಿ ಮತಬ್ಯಾಂಕ್ ಅಗಿ ಗುರುತಿಸಿಕೊಂಡಿರುವಂತ ಶೋಷಿತ ಸಮುದಾಯವಾಗಿದೆ. ರಾಜಕೀಯವಾಗಿ ಬಲಗೈ ಸಮುದಾಯದವರಾದ ಯಲ್ಲಮ್ಮ ದೇವಿ ಬಳಗದವರಿಗೆ ಕಾಂಗ್ರೇಸ್ ಪಕ್ಷದಲ್ಲಿ ಅವಕಾಶ ಕಲ್ಪಿಸಿ ಬೇಕೆಂದರು.
ಮುಖಂಡ ಮಾರ್ಜೇನಹಳ್ಳಿ ಬಾಬು ಮಾತನಾಡಿ ಜಿಲ್ಲೆಯ ೬ ವಿಧಾನ ಸಭಾ ಕ್ಷೇತ್ರದಲ್ಲಿ ಬಂಗಾರಪೇಟೆ, ಕೆ.ಜಿ.ಎಫ್ ಹಾಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದರೂ ಸಹ ಬಲಗೈ ಸಮುದಾಯದವರನ್ನು ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸದೆ ನಿರ್ಲಕ್ಷಿಸಿರುವುದು ನೋವಿನ ಸಂಗತಿಯಾಗಿದೆ ಎಂದರು.
ಮುಳಬಾಗಿಲಿನಲ್ಲಿ ಬೋವಿ ಸಮುದಾಯ, ಬಂಗಾರಪೇಟೆಯಲ್ಲಿ ಚಿಕ್ಕತಾಳಿ ಸಮುದಾಯ ಹಾಗೂ ಕೆ.ಜಿ.ಎಫ್ ಕ್ಷೇತ್ರದಲ್ಲಿ ಎಡಗೈ ಸಮುದಾಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದರೆ ನಮ್ಮ ಸಮುದಾಯದಲ್ಲಿ ಅಕಾಂಕ್ಷಿಗಳಿದ್ದರೂ ಸಹ ಯಾವ ಕ್ಷೇತ್ರದಲ್ಲೂ ಯಾರಿಗೂ ಅವಕಾಶ ನೀಡದೆ ವಂಚಿಸಲಾಗಿದೆ. ಈ ಮೀಸಲು ಕ್ಷೇತ್ರಗಳಲ್ಲಿ ಶೇ ೮೦ ರಷ್ಟು ಮಂದಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರೇ ಇದ್ದರೂ ಸಹ ಅವಕಾಶ ನೀಡದೆ ಕೇವಲ ಓಟ್ ಬ್ಯಾಂಕ್‌ಗಳಂತೆ ಸಮುದಾಯವನ್ನು ಬಳಿಸಿ ಕೊಂಡು ರಾಜಕೀಯವಾಗಿ ಶೋಷಣೆಗೆ ತುತ್ತಾಗಿದ್ದೇವೆ ಎಂದರು,
ಜಿಲ್ಲಾ ಕಾಂಗ್ರೇಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಜಯದೇವ್ ಅವರು ಮಾತನಾಡಿ ಕೋಲಾರ ಲೋಕಸಭಾ ಮೀಸಲು ಕ್ಷೇತ್ರವು ಜಿ.ವೈ.ಕೃಷ್ಣನ್ ಕಾಲದಿಂದಲೂ ಕಾಂಗ್ರೇಸ್ ಪಕ್ಷದ ಭದ್ರ ಕೋಟಿಯಾಗಿದ್ದು ವಿವಿಧ ಕಾರಣಗಳಿಗೆ ಎರಡ್ಮೂರು ಅವಧಿ ಹೊರತು ಪಡೆಸಿದರೆ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವೇ ಆದಿಪತ್ಯ ವಹಿಸಿರುವುದು ಇತಿಹಾಸವಾಗಿದೆ ಎಂದರು,
ಕೆ.ಹೆಚ್. ಮುನಿಯಪ್ಪ ಅವರು ಸತತವಾಗಿ ೭ ಭಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಬಲಗೈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಬಹುತೇಕ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರೇ ಅಗಿದ್ದಾರೆ ಹಾಗಾಗಿ ಜಿಲ್ಲೆಯ ೬ ಕ್ಷೇತ್ರಗಳಲ್ಲಿ ೩ ಮೀಸಲು ಕ್ಷೇತ್ರವಾಗಿ ಗುರುತಿಸಿ ಕೊಂಡಿದೆ.ಈಗಾಗಲೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೮ ವಿಧಾನ ಸಭಾ ಕ್ಷೇತ್ರದಲ್ಲೂ ಸಮುದಾಯವರು ಸಂಘಟಿತರಾಗಿ ಈ ವೇದಿಕೆಯನ್ನು ರಚಿಸಿ ಕೊಂಡು ಬಲಗೈ ಸಮುದಾಯದಲ್ಲಿ ಹಲವು ಅಕಾಂಕ್ಷಿಗಳಿದ್ದಾರೆ ಅವರ ಪೈಕಿ ಯಾರಿಗೆ ನೀಡಿದರೂ ಸಹ ನಾವೆಲ್ಲಾ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಮುದಾಯ ಮುಖಂಡರಾದ ಬಂಗಾರಪೇಟೆ ಎಂ.ನಾರಾಯಣ್, ಹೆಚ್.ವಿ.ಹರೀಶ್, ಬಂಗಾರಪೇಟೆ ಐಪಲ್ಲಿ ನಾರಾಯಣಸ್ವಾಮಿ, ಪಿ.ವಿ.ಸಿ.ಕೃಷ್ಣಪ್ಪ. ಆಟೋ ನಾರಾಯಣಸ್ವಾಮಿ,ಮುನಿಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.