ರುದ್ರಭೂಮಿಗಾಗಿ ಲೋಕಾಯುಕ್ತ ಮೊರೆ ಹೋದ ಸಂಘಟನೆಗಳು
ಸಂಜೆವಾಣಿ ವಾರ್ತೆ
ಔರಾದ್ :ಮಾ.1: ಪಟ್ಟಣದ ಹೃದಯ ಭಾಗದಲ್ಲಿರುವ ಅಮರೇಶ್ವರ ದೇವಸ್ಥಾನದ ಬಳಿಯಲ್ಲಿರುವ ರುದ್ರಭೂಮಿ ಒತ್ತುವರಿಯಾಗಲು ಪಟ್ಟಣ ಪಂಚಾಯತ ಅಧಿಕಾರಿಗಳೇ ಕಾರಣವಾಗಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಸಂಘಟನೆಯ ಪದಾಧಿಕಾರಿಗಳು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಬುಧವಾರ ಪಟ್ಟಣದಲ್ಲಿ ಅಹವಾಲು ಸ್ವೀಕರಿಸಲು ಆಗಮಿಸಿದ ಲೋಕಾಯುಕ್ತ ಪೆÇಲೀಸ್ ಇನ್ಸ್ ಪೆಕ್ಟರ್ ಪ್ರದೀಪ ಕೊಳ್ಳಾ ಅವರಿಗೆ ಭೇಟಿಯಾದ ಹಿಂದೂಪರ ಹಾಗೂ ಕನ್ನಡ ಪರ ಸಂಘಟನೆಯ ಒಕ್ಕೂಟದ ಪದಾಧಿಕಾರಿಗಳು ಮನವಿಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಅನೇಕ ವರ್ಷದಿಂದ ರುದ್ರಭೂಮಿಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯತಿಯ ಅಧಿನದಲ್ಲಿ ಬರುವ ರುದ್ರಭೂಮಿಯ 16 ಗುಂಟೆ ಜಮೀನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಅಂಗಡಿಗಳು ನಿರ್ಮಿಸಿ, ಲಕ್ಷಾಂತರ ರೂ. ಬಾಡಿಗೆ ಪಡೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಕ್ರಮಕೈಗೊಳ್ಳದಿರುವುದು ನೋಡಿದರೇ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಯೊಂದಿಗೆ ಕೈಜೋಡಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನೂ ಮೃತಪಟ್ಟರೇ ಅಂತ್ಯಸಂಸ್ಕಾರ ಮಾಡಲು ಸಮರ್ಪಕವಾಗಿ ಜಾಗವಿಲ್ಲ. ಕುಡಲೇ ಒತ್ತುವರಿಯಾದ ನಿವೇಶನ ತೆರವು ಮಾಡಬೇಕು. ರುದ್ರಭೂಮಿ ಸುತ್ತಲೂ ಕಾಂಪೌಂಡ್ ನಿರ್ಮಾಣ, ನೀರು ಮತ್ತು ವಿದ್ಯುತ್ ಸೌಕರ್ಯ ಮಾಡಿಕೊಡಬೇಕು. ಹೆಚ್ಚುವರಿಯಾಗಿ ಬೇರೆಡೆ 10 ಎಕರೆ ಜಮೀನನ್ನು ರುದ್ರಭೂಮಿಗಾಗಿ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಕಳೆದ ಒಂದು ವಾರದಿಂದ ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದ ಕಾರ್ಯಕರ್ತರು ಲೋಕಾಯುಕ್ತ ಇಲಾಖೆಯಿಂದ ಸಮಗ್ರ ತನಿಖೆ ನಡೆಸುವ ಜತೆಗೆ ಒತ್ತುವರಿ ಮಾಡಲು ಸಹಕರಿಸಿದ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ತಾಲೂಕು ಅಧ್ಯಕ್ಷ ಸಿದ್ದು ಚಾರೆ, ಶರಣಪ್ಪ ಪಾಟೀಲ್, ರಾಜಕುಮಾರ ಎಡವೆ, ವಿವೇಕ ನಿರ್ಮಳೆ, ರಜನಿ ದಾಮಾ, ವಿರೇಶ ಕನಕೆ, ಅಂಬರೇಶ್, ಶ್ರೀಕಾಂತ ಚಿದ್ರೆ ಸೇರಿದಂತೆ ಅನೇಕರಿದ್ದರು.