ಪದವಿಯನ್ನು 4 ವರ್ಷಕ್ಕೇರಿಸಿರುವ ನಡೆ ಖಂಡಿಸಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.01:- ನಾಲ್ಕು ವರ್ಷದ ಪದವಿ ಕೋರ್ಸ್ ನ ನಿರ್ಧಾರ ಘೋಷಿಸುವಲ್ಲಿನ ವಿಳಂಬ ಹಾಗೂ ಅಪ್ರಜಾತಾಂತ್ರಿಕವಾಗಿ ಹೇರಿದ ನಾಲ್ಕು ವರ್ಷದ ಪದವಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದ ಕ್ರಾರ್ಡ್ ಭವನದ ಎದುರು ಎಐಡಿಎಸ್‍ಓ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‍ಓ ಜಿಲ್ಲಾಧ್ಯಕ್ಷರಾದ ಸುಭಾಷ್ ಮಾತನಾಡಿ, ಕಳೆದ ಬಾರಿಯ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಅತ್ಯಂತ ತರಾತುರಿಯಲ್ಲಿ ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಎನ್‍ಇಪಿ-2020 ಯನ್ನು ಜಾರಿ ಮಾಡಿತು.ಎನ್‍ಇಪಿ-2020 ಭಾಗವಾಗಿದ್ದ ನಾಲ್ಕು ವರ್ಷದ ಪದವಿಯನ್ನು ಅಪ್ರಜಾತಾಂತ್ರಿಕವಾಗಿ ಹೇರಿಕೆ ಮಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕವನ್ನುಂಟು ಮಾಡಿತು ಎಂದು ಕಿಡಿಕಾರಿದರು.
ಈ ಹಿನ್ನೆಲೆ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯು ಶಿಕ್ಷಣಕ್ಕೆ ಮಾರಕವಾಗಿರುವ ಎನ್‍ಇಪಿ-2020 ವಿರುದ್ಧ ರಾಜ್ಯದಲ್ಲಿ ಹಲವಾರು ಬಲಿಷ್ಠ ಚಳುವಳಿಯನ್ನು ಕಟ್ಟಿದೆ. ಈ ನೀತಿಯ ವಿರುದ್ಧ ಐತಿಹಾಸಿಕವಾಗಿ 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂಸೇವರಕರಾಗಿ ರಾಜ್ಯದ ಮೂಲೆ ಮೂಲೆಗಳಿಂದ 36 ಲಕ್ಷ ಸಹಿಗಳನ್ನು ಸಂಗ್ರಹಿಸಿದರು ಎಂದು ಹೇಳಿದರು.
ಅಭೂತಪೂರ್ವ ಹೋರಾಟಗಳ ಲವಾಗಿ ರಾಜ್ಯದಲ್ಲಿ ಎನ್‍ಇಪಿ- 2020 ಅನ್ನು ರಾಜ್ಯದಿಂದ ಹಿಮ್ಮೆಟ್ಟಿಸಲಾಯಿತು ಹಾಗೂ ರಾಜ್ಯ ಸರಕಾರವು ರಾಜ್ಯದ ಶಿಕ್ಷಣ ನೀತಿಯನ್ನು ರೂಪಿಸಲು ಸಮಿತಿ ರಚಿಸಿತು .ಜನಪರ ಶಿಕ್ಷಣ ನೀತಿಯನ್ನು ರೂಪಿಸಲು ಆಗ್ರಹಿಸಿ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯಯಿಂದ ಕರ್ನಾಟಕದ 23 ಸಾವಿರಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ ಸಮೀಕ್ಷೆಯನ್ನು ನಡೆಸಲಾಯಿತು. ನಡೆಸಿದ ಸಮೀಕ್ಷೆಯಲ್ಲಿ ಶೇ.83 ರಷ್ಟು ವಿದ್ಯಾರ್ಥಿಗಳು ನಾಲ್ಕು ವರ್ಷದ ಪದವಿ ಬೇಡವೆಂದು ಹೇಳಿದ್ದಾರೆ ಎಂದರು.
ರಾಜ್ಯ ಸರಕಾರ ರಚಿಸಿರುವ ರಾಜ್ಯ ಶಿಕ್ಷಣ ಆಯೋಗವು ರಾಜ್ಯ ಶಿಕ್ಷಣ ನೀತಿ ಕುರಿತಾದ ಅಂತಿಮ ವರದಿಯನ್ನು ಆಗಸ್ಟ್ ನಲ್ಲಿ ನೀಡುವುದಾಗಿ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ. 4 ವರ್ಷದ ಪದವಿಯನ್ನು ಹಿಂಪಡೆಯುವ ಕುರಿತು ರಾಜ್ಯ ಸರಕಾರ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಸರಕಾರದ ಈ ವಿಳಂಬವು ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಉಪಾಧ್ಯಕ್ಷ ನಿತಿನ್, ಸ್ವಾತಿ, ಎಐಡಿಎಸ್‍ಓ ಕಾರ್ಯಕರ್ತರಾದ ಚಂದನ, ಚಂದ್ರಿಕಾ, ಹೇಮಾಲತಾ,ಅಂಜಲಿ, ದಿಶಾ,ಅಭಿಷೇಕ್, ಬೀರಪ್ಪ, ಮಹಾರಾಜ ಮತ್ತು ಮಹಾರಾಣಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.