ಚಿರತೆ ಸೆರೆಗೆ ಬೋನು ಇಟ್ಟ ಅರಣ್ಯ ಅಧಿಕಾರಿಗಳು
ಸಂಜೆವಾಣಿ ವಾರ್ತೆ
ಹನೂರು. ಮಾ.01:- ತಾಲ್ಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಚಿರತೆ ದಾಳಿಗೆ ನಾಲ್ಕು ಕುರಿಗಳು ಬಲಿಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಭೇಟಿ ನೀಡಿ ಚಿರತೆ ಸೆರೆ ಹಿಡಿಯಲು ಬೋನು ಇಟ್ಟಿದ್ದಾರೆ.
ಸಂದನ ಪಾಳ್ಯ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿದ್ದ ನಾಲ್ಕು ಕುರಿಗಳನ್ನು ಚಿರತೆ ಬಲಿ ಪಡೆದಿತ್ತು. ಈ ಸಂಬಂಧ ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿಯಲು ಆಗ್ರಹಿಸಿದ್ದರು.
ಈ ನಿಟ್ಟಿನಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಡಾ ಸಂತೋಷ್ ಕುಮಾರ್ ದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಚಿರತೆಯನ್ನು ಸೆರೆ ಹಿಡಿಯಲು ಬೋನು ಇಟ್ಟಿದ್ದು, ಚಿರತೆಯ ಚಲನವಲನವನ್ನು ಪತ್ತೆಹಚ್ಚಲು ಸೂಕ್ತ ಕ್ರಮ ಕೈಗೊಂಡಿದ್ದಾರೆ.