ಮೈಸೂರಲ್ಲಿ ಐತಿಹಾಸಿಕ ಮಾನವ ಸರಪಳಿ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.16:- ಪ್ರಜಾಪ್ರಭುತ್ವದ ಹಬ್ಬವನ್ನು ವಿಭಿನ್ನವಾಗಿ ಆಚರಿಸುವ ನಿಟ್ಟಿನಲ್ಲಿ ಮೈಸೂರಲ್ಲಿ 58 ಕಿ.ಮೀ ಐತಿಹಾಸಿಕ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರಲ್ಲದೇ ಗಜಪಡೆಯ ಆನೆಗಳು ಬಾಗವಹಿಸಿದ್ದು ವಿಶೇಷ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಬಾಗ ಶಾಸಕ ತನ್ವೀರ್ ಸೇಠ್ ಉದ್ಘಾಟಿಸಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ 60ಸಾವಿರಕ್ಕೂ ಮಂದಿ ಅಧಿಕ ಭಾಗಿಯಾಗಿದ್ದರು. ಪೌರ ಕಾರ್ಮಿಕರು, ಹೋಟೆಲ ಮಾಲೀಕರ ಸಂಘಟನೆ, ಆಟೋ ಚಾಲಕರ ಸಂಘಟನೆ, ಟ್ಯಾಕ್ಸಿ ಚಾಲಕರು, ದಲಿತ ಸಂಘರ್ಷ ಸಮಿತಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಎಲ್ಲಾ ಇಲಾಖೆಯ ಸರ್ಕಾರಿ ನೌಕರರು ಸೇರಿ 30 ಕ್ಕೂ ಸಂಘಟನೆಗಳು ಭಾಗವಹಿಸಿ ಸಂಭ್ರಮಿಸಿದವು. ಬೆ.9.30 ರಿಂದ 9,37 ರವರಗೆ ಮಾನವ ಸರಪಳಿಯಲ್ಲಿ ಸರತಿ ಸಾಲಿನಲ್ಲಿ ನಿಂತರು. ಬಳಿಕ ನಾಡಗೀತೆ ಮಾಡಲಾಯಿತು. ಸಂವಿಧಾನದ ಪ್ರಸ್ತಾವನೆ ಓದಲಾಯಿತು. 10 ಗಂಟೆಗೆ ಮಾನವ ಸರಪಳಿಯಲ್ಲಿಯೇ ಏಕಕಾಲದಲ್ಲಿ ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ಜೈಹಿಂದ್, ಜೈ ಕರ್ನಾಟಕ ಘೋಷಣೆ ಕೂಗಲಾಯಿತು.
ಎಲ್ಲೆಲ್ಲಿ: ತಾಲ್ಲೂಕಿನ ಕಳಸ್ತವಾಡಿ ಸಿದ್ದಲಿಂಗ ಪುರದಿಂದ ಪ್ರಾರಂಭವಾಗಿ ಮಣಿಪಾಲ್ ಆಸ್ಪತ್ರೆ, ಪೌಂಟನ್ ಸರ್ಕಲ್, ಗಾಂಧಿ ನಗರದ ಅಂಬೇಡ್ಕರ್ ವೃತ್ತ, ಟೌನ್ ಹಾಲ್, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಹಾರ್ಡಿಂಜ್ ಸರ್ಕಲ್, ಮೃಗಾಲಯ, ರೇಸ್ ಕೋರ್ಸ್ ಸರ್ಕಲ್, ಪೆÇಲೀಸ್ ಭವನ, ಸಂಗೊಳ್ಳಿ ರಾಯಣ್ಣ ಸರ್ಕಲ್, ಕಮಾನ್ ಗೇಟ್, ರಿಂಗ್ ರಸ್ತೆ, ವರುಣ ಗ್ರಾಮ, ಕೀಳನ ಪುರ, ಕೆಂಪಯ್ಯನ ಹುಂಡಿ, ಇಂಡುವಾಳು, ಗರ್ಗೇಶ್ವರಿ, ತಿ.ನರಸೀಪುರ ಟೌನ್, ಗಂಜಾಂ ನರಸಿಂಹ ಸ್ವಾಮಿ ದೇವಸ್ಥಾನ, ಅಲಗೂಡು, ಕುರಬೂರು, ಮಾಡ್ರಳ್ಳಿ ಗೇಟ್, ಮೂಗೂರು ಗ್ರಾಮದ ಮೂಲಕ ಚಾಮರಾಜನಗರ ಜಿಲ್ಲೆಯ ಗಡಿ ಪ್ರವೇಶಿಸಿತು.
ನಗರದ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರಿನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ಪ್ರಭಾಪ್ರಭುತ್ವದ ಗಟ್ಟಿಗೊಳ್ಳಬೇಕಾದರೆ ಮಾನವೀಯತೆ ಹಾಗೂ ಸಹಾಯ ಮಾಡುವ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಭಾರತ ಇಂದು ಪ್ರಜಾಪ್ರಭುತ್ವದ ಅತೀ ದೊಡ್ಡ ದೇಶವಾಗಿದೆ. ರಾಜ್ಯದ ಬೀದರಿಂದ ಹಿಡಿದು ಚಾಮರಾಜನಗರದ ವರೆಗೆ ಮಾನವ ಸರಪಳಿ ನಿರ್ಮಿಸಿ ಇತಿಹಾಸ ಸೃಷ್ಟಿಸುವುದಕ್ಕೆ ಸಾಕ್ಷಿ ಯಾಗಿದ್ದು ಇದರ ಉದ್ದೇಶ ಸಂವಿಧಾನವನ್ನು ಇನ್ನು ಗಟ್ಟಿಗೊಳಿಸಲು, ಅದರ ಅರಿವು ಮೂಡಿಸುವುದಾಗಿದೆ. ‘ಡಾ.ಬಿ.ಆರ್. ಅಂಬೇಡ್ಕರ್ ದೇಶಕ್ಕೆ ಅತ್ಯುತ್ತಮ ಸಂವಿಧಾನವನ್ನು ನೀಡಿದ್ದಾರೆ. ಅದನ್ನು ನಾವೆಲ್ಲರೂ ನಮಗಾಗಿ ಅರ್ಪಿಸಿಕೊಂಡು ಶಾಸನವಾಗಿ ಒಪ್ಪಿಕೊಂಡಿದ್ದೇವೆ. ಕೈಹಿಡಿದು ನಿಲ್ಲುವುದರೊಂದಿಗೆ, ಪರಸ್ಪರ ಸಹಾಯ ಹಸ್ತ ಚಾಚುವುದನ್ನು ಎಲ್ಲರೂ ಮಾಡಬೇಕು ಎಂದರು.
ಜಾತಿ ಯಾವುದೇ ಇರಬಹುದು. ಯಾವ ಮನುಷ್ಯನೂ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ನಾವು ಸೃಷ್ಟಿಸಿರುವ ಜಾತಿಯಲ್ಲಿ ಮಾನವೀಯ ಮೌಲ್ಯಗಳಿಗೆ ಮಾನವ ಸಂಬಂಧಗಳಿಗೆ ಹೆಚ್ಚು ಆದ್ಯತೆ ನೀಡೋಣ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, `ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮಾನತೆಯನ್ನು ಸಂವಿಧಾನ ನೀಡಿದೆ. ಎಲ್ಲರನ್ನೂ ಒಂದೆಂದು ಕಾಣಬೇಕು. ಎಲ್ಲರ ಹಿತವನ್ನೂ ಕಾಪಾಡಲು ನಾವೆಲ್ಲ ಮುಂದಾಗಬೇಕು’ ಎಂದರು. ಬೆಳಿಗ್ಗೆ ತಾಲೀಮು ಮುಗಿಸಿ ಅರಮನೆಗೆ ವಾಪಸಾಗುತ್ತಿದ್ದ ದಸರಾ ಮಹೋತ್ಸವದ 13 ಆನೆಗಳನ್ನು ಕೂಡ ಸಾಲಿನಲ್ಲಿ ನಿಲ್ಲಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಶಾಸಕ ಡಿ.ರವಿಶಂಕರ್, ಮುಡಾ ಅಧ್ಯಕ್ಷ ಮರಿಗೌಡ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರವೀಂದ್ರ ಹೆಗಡೆ, ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ನಗರ ಪೆÇಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಪೆÇಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಇನ್ನಿತರರು ಉಪಸ್ಥಿತರಿದ್ದರು.