ಪ್ರಾಧಿಕಾರದ ನಿಯಮಾನುಸಾರ ನಿವೇಶನ: ಎಚ್.ವಿ.ರಾಜೀವ್
ಸಂಜೆವಾಣಿ ನ್ಯೂಸ್
ಮೈಸೂರು: ಸೆ.16:- ಜ್ಞಾನಗಂಗಾ ಗೃಹನಿರ್ಮಾಣ ಸಹಕಾರ ಸಂಘಕ್ಕೆ ಒಂದೇ ದಿನದಲ್ಲಿ 848 ನಿವೇಶಗಳು ಬಿಡುಗಡೆಯಾಗಿಲ್ಲ. ಪ್ರಾಧಿಕಾರದ ನಿಯಮಗಳಂತೆ ನಿವೇಶನಗಳು ಬಿಡುಗಡೆಯಾಗಿವೆ. ಹಿಂದಿನ ಆಯುಕ್ತ ನಟೇಶ್ ಅವರ ಆರೋಪ ಸತ್ಯಕ್ಕೆ ದೂರವಾದುದು ಎಂದು ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸ್ಪಷ್ಟಪಡಿಸಿದರು.
ಪ್ರಮತಿ ಹಿಲ್ ವ್ಯೂ ಶಾಲೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಒಂದೇ ದಿನದಲ್ಲಿ 848 ನಿವೇಶನಗಳನ್ನು ಬಿಡುಗಡೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ಸಮೇತ ವಿವರಣೆ ನೀಡಿದರು.
ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಸದಸ್ಯರು ಕಟ್ಟಿದ ಹಣದಿಂದ ಸಕ್ರಮ ಬಡಾವಣೆ ರಚನೆ ಮಾಡಲಾಗಿದೆ. ಸಂಘದಲ್ಲಿ 3500 ಸದಸ್ಯರಿದ್ದಾರೆ. ಇದುವರೆಗೆ 2500 ನಿವೇಶನ ಹಂಚಿಕೆ ಮಾಡಲಾಗಿದೆ. ಕೃಷಿ ಭೂಮಿಯನ್ನು ಮಾಲೀಕರಿಂದ ನೇರವಾಗಿ ಮಾರುಕಟ್ಟೆ ದರದಲ್ಲಿ ಖರೀದಿ ಮಾಡಲಾಗಿದೆ. ಕೃಷಿ ಭೂಮಿಯಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲಾಗಿದೆ. ಯಾವುದೇ ಸರ್ಕಾರಿ, ಪಿಟಿಸಿಎಲ್, ಕಂದಾಯ ಭೂಮಿಯಲ್ಲಿ ಬಡಾವಣೆ ರಚಿಸಿಲ್ಲ. ಖಾಸಗಿ ಜಮೀನನ್ನು ಖರೀದಿಸಿ ಬಡಾವಣೆ ರಚನೆ ಮಾಡಲಾಗಿದೆಯೇ ಹೊರತು ಕಾನೂನುಬಾಹಿರವಾಗಿ ನಿರ್ಮಿಸಿಲ್ಲ ಎಂದರು.
ಜಯಪುರ ಹೋಬಳಿಯ ಬಲ್ಲಹಳ್ಳಿ, ಕೇರ್ಗಳ್ಳಿ ಹಾಗೂ ನಗರ್ತಹಳ್ಳಿ ಗ್ರಾಮಗಳಲ್ಲಿ 252 ಎಕರೆ ಪ್ರದೇಶದಲ್ಲಿ ನಾಲ್ಕು ಹಂತದ ಯೋಜನೆ ಮಾಡಲು ಭೂ ಪರಿವರ್ತನೆ, ಅನ್ಯಕ್ರಾಂತ ಮಾಡಿದ ಮೇಲೆ ನಕ್ಷೆ ಅನುಮೋದನೆ ಪಡೆಯಲಾಗಿದೆ. ಫೆರಿಫೆರಲ್ ರಿಂಗ್ ರಸ್ತೆ ಹಾದು ಹೋಗುವ ಸಾಧ್ಯತೆ ಇರುವುದನ್ನು ಅಂದಾಜಿಸಿ 13.4 ಎಕರೆ ಜಮೀನನ್ನು ಹೊರತುಪಡಿಸಿ ಪ್ಲಾನ್‍ಗೆ ಅನುಮೋದನೆ ಪಡೆಯಲಾಗಿದೆ. ಅಂದು ಫೆರಿಫೆರಲ್ ರಿಂಗ್ ರಸ್ತೆ ಹಾದು ಹೋಗುತ್ತದೆ ಎನ್ನುವ ಸುಳಿವೇ ಇಲ್ಲದಿದ್ದರೂ ನಗರದ ಬೆಳವಣಿಗೆ ದೃಷ್ಟಿಯಿಂದ ಜಾಗ ಬಿಡಲಾಗಿದೆ. ಒಂದು ಒಂದುವೇಳೆ ಕಾನೂನಾತ್ಮಕ ಸಮಸ್ಯೆ ಉಂಟಾಗಿದ್ದರೆ ಅದಕ್ಕೆ ಮುಡಾ ಕಾರಣ ಎಂದರು.
2016ರಲ್ಲಿ ನಾಲ್ಕು ಯೋಜನೆಗಳಿಗೆ ತಾತ್ಕಾಲಿಕ ನಕ್ಷೆ ಅಂಗೀಕಾರ ಮಾಡಿಕೊಡಲಾಗಿದೆ. ಅದಕ್ಕೆ 10.26 ಕೋಟಿ ರೂ ಪಾವತಿಸಲಾಗಿದೆ. 2018ರ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದ ಬಳಿಕ ಸರ್ಕಾರದ ನಿಯಮಾವಳಿಗಳನ್ವಯ ಒಟ್ಟು ವಿಸ್ತೀರ್ಣದ ಪೈಕಿ ಶೇ.15ರಷ್ಟು ಉದ್ಯಾನವನಕ್ಕಾಗಿ, ಶೇ.5ರಷ್ಟು ನಾಗರಿಕ ಸೌಕರ್ಯ ನಿವೇಶನಕ್ಕಾಗಿ ಕಾಯ್ದಿರಿಸಲು ಹಾಗೂ ತಾತ್ಕಾಲಿಕ ಮಹಾಯೋಜನೆಯ ಪ್ರಸ್ತಾವನೆಗಳನ್ನು ಅಳವಡಿಸಲು ಸೂಚಿಸಲಾಗಿತ್ತು. ನಂತರ, ತಾಂತ್ರಿಕ ಸಮಿತಿಯ ವರದಿಯಂತೆ 2018ರಲ್ಲಿ ಮತ್ತೆ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿತ್ತು ಎಂದು ವಿವರಿಸಿದರು.
ರಾಮದಾಸ್ ಅಧ್ಯಕ್ಷತೆಯಲ್ಲಿ ತೀರ್ಮಾನ: ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನಿವೇಶನ ಬಿಡುಗಡೆ ಸಂಬಂಧ ನಡೆದ ಸಭೆಯಲ್ಲಿ ನಾನು ಭಾಗವಹಿಸಿರಲಿಲ್ಲ. ಶಾಸಕರಾಗಿದ್ದ ಎಸ್.ಎ.ರಾಮದಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಗಿದೆ. ಸದಸ್ಯರಾದ ಎಲ್.ನಾಗೇಂದ್ರ, ತನ್ವೀರ್‍ಸೇಠ್, ಕೆ.ಟಿ.ಶ್ರೀಕಂಠೇಗೌಡರು ಸರ್ಕಾರದ ನಿಯಮಾವಳಿಗಳಿಗೆ ತಕ್ಕಂತೆ ಇದ್ದರೆ ಅನುಮೋದನೆ ಕೊಡಬಹುದೆಂದು ತಿಳಿಸಿದ್ದರಿಂದ ಶೇ.30ರಷ್ಟು ಅಂದರೆ 848 ನಿವೇಶನಗಳನ್ನು ಬಿಡುಗಡೆ ಮಾಡಲು ಸಭೆಯಲ್ಲಿ ಸರ್ವಾನುಮತದ ನಿರ್ಧಾರವಾಗಿದೆ. ಇದರಲ್ಲಿ ಅಧ್ಯಕ್ಷರಾಗಿ ಯಾವುದೇ ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ ಎಂದರು.
ಸಭೆಯಲ್ಲಿ ನಾಲ್ಕು ಯೋಜನೆಗಳಿಂದ 848 ನಿವೇಶನಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ಕೊಡಲಾಗಿದೆ. ಆದರೆ, ಬೇರೆ ಬೇರೆ ದಿನಾಂಕಗಳಲ್ಲಿ ಕಾಲಾನುಕಾಲವಾಗಿ ನಿವೇಶನಗಳನ್ನು ಬಿಡುಗಡೆ ಮಾಡಲಾಗಿದೆ. ಒಂದೇ ದಿನ ನಿವೇಶನ ಬಿಡುಗಡೆ ಮಾಡಲಾಗಿದೆ ಎನ್ನುವ ಆರೋಪ ಸುಳ್ಳು. ತಾಂತ್ರಿಕ ವರದಿಯ ಆಧಾರದ ಮೇಲೆ ತೀರ್ಮಾನವಾಗಿದೆ ಎನ್ನುವುದಕ್ಕೆ ದಾಖಲೆಗಳು ಇವೆ ಎಂದರು.
ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮುಖಂಡ ಜಯಂತ್, ವಾಸು ಹಾಜರಿದ್ದರು.