ಅತ್ಯುತ್ತಮ ಶಿಕ್ಷಕರನ್ನು ಸಮಾಜ ಪೂಜಿಸುತ್ತದೆ, ಗೌರವಿಸುತ್ತದೆ
ಸಂಜೆವಾಣಿ ವಾರ್ತೆ
ಮಂಡ್ಯ : ಸೆ.16:- ಅತ್ಯುತ್ತಮ ಶಿಕ್ಷಕರನ್ನು ಸಮಾಜ ಪೂಜಿಸುತ್ತದೆ. ಗೌರವಿಸುತ್ತದೆ. ನೂರು ವರ್ಷ ಕಳೆದರೂ ಸಹ ಉತ್ತಮ ಶಿಕ್ಷಕರು ಜನರ ಮನಸ್ಸಿನಿಂದ ಕಣ್ಮರೆಯಾಗುವುದಿಲ್ಲ. ಶಿಕ್ಷಕರಾಗಿರುವವರು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಸಮಾಜ ಮಾದರಿಯಾಗಿ ನಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ತಿಳಿಸಿದರು.
ಮಂಡ್ಯ ಅಮೃತ ಅಲೆಯನ್ಸ್ ಸಂಸ್ಥೆ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್, ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಇವರ ವತಿಯಿಂದ ಅನಿಕೇತನ ಪ್ರೌಢಶಾಲಾ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ, ಆದರ್ಶ ಶಿಕ್ಷಕರ ಪ್ರಶಸ್ತಿ ಪ್ರದಾನ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದುಕಿಗೆ ಶಿಕ್ಷಣ ಮುಖ್ಯವಾಗುವುದಿಲ್ಲ. ದುಡಿಮೆಯೇ ಮುಖ್ಯ. ಆದರೆ, ಬದುಕಿನಲ್ಲಿ ಜೀವನವನ್ನು ಚೆನ್ನಾಗಿ ಅನುಭವಿಸಬೇಕು ಎಂದರೆ ಶಿಕ್ಷಣ ಅಗತ್ಯ. ಮಾನವೀಯ ಮೌಲ್ಯಗಳ, ಮನುಷ್ಯತ್ವದ, ಸಮಾನತೆಯ ಮೇಲೆ, ಪ್ರೀತಿ ವಿಶ್ವಾಸದ ಮೇಲೆ, ಧರ್ಮ, ಧರ್ಮಗಳ ನಡುವೆ ತಿಕ್ಕಾಟವಿಲ್ಲದೆ ವಿದ್ಯಾರ್ಥಿಗಳ ಭವಿಷ್ಯದ ಜೀವನವನ್ನು ಕಟ್ಟಿಕೊಟುವ ಶಿಕ್ಷಣ ನೀಡಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‍ನ ಅಧ್ಯಕ್ಷ ಎಂ. ವಿನಯ್‍ಕುಮಾರ್ ಮಾತನಾಡಿ, ಪ್ರತಿಯೊಬ್ಬ ಶಿಕ್ಷಕರಿಗೆ ಅರಿವು ಇರಬೇಕು. ಯಾರು ಸರಿಂiÀಲ್ಲ ಕಲಿಸುವುದಿಲ್ಲ ಅಂಥವರು ಸಹಜವಾಗಿ ಮಕ್ಕಳ ದೃಷ್ಠಿಯಲ್ಲಿ ಕೆಟ್ಟದಾಗಿ ಕಾಣುವರು. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಉತ್ತಮ ಶಿಕ್ಷಕರಾದ ಡಾ. ರಾಮಲಿಂಗಯ್ಯ, ಎಂ.ಎಸ್. ಜಯಶ್ರೀ, ಎನ್. ತೇಜೇಶ್ವರಿ, ಕೆಎಸ್. ಸುರೇಶ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಮಂಡ್ಯ ಅಮೃತ ಅಲೆಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಲೋಕೇಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯ, ಇಸಿಓ ನಾಗರಾಜು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.