ಮೊರಾರ್ಜಿ ದೇಸಾಯಿ ದೇಶ ಕಂಡ ಅಪರೂಪದ ಜನನಾಯಕ
ಕಲಬುರಗಿ:ಫೆ.29: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಅಧಿಕಾರ ಮತ್ತು ರಾಜಕೀಯ ಎಂದಿಗೂ ಸ್ವಹಿತಕ್ಕಾಗಿ ಬಳಸದೆ, ದೇಶಕ್ಕಾಗಿ ಬಳಸಿದ, ನಮ್ಮ ದೇಶಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು, ಅಪರೂಪ ವ್ಯಕ್ತಿತ್ವದ ಮಹಾನ ನಾಯಕರಾಗಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಕೊಹಿನೂರ ಪದವಿ ಕಾಲೇಜಿನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಮೊರಾರ್ಜಿ ದೇಸಾಯಿ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಭಾರತದ ಪ್ರಧಾನಿಯಾಗಿ ಮಾಡಿದ ಪ್ರಮುಖ ಕಾರ್ಯಗಳೆಂದರೆ, ಪ್ರಜಾಪ್ರಭುತ್ವದ ಸಿದ್ಧಾಂತಗಳಿಗೆ ವಿರುದ್ಧವಾಗಿ ಸ್ವಾತಂತ್ರ್ಯ ಹರಣದ ಪರ ತರಲಾದ ಸಂವಿಧಾನದ ತಿದ್ದುಪಡಿಗಳನ್ನು ರದ್ದುಗೊಳಿಸಿದರು. ಜನರ ಹಾಗೂ ಪತ್ರಿಕಾ ಮಾಧ್ಯಮದ ಕಳೆದು ಹೋದ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸಿದರು. ಮುಕ್ತ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳು ಎಲ್ಲರಿಗೂ ಸುಲಭವಾಗಿ ದೊರೆಯುವಂತೆ ಕ್ರಮಕೈಗೊಂಡರು. ಅನೇಕ ಮೂಲಭೂತ ಸೌಕರ್ಯಗಳನ್ನು ಎಲ್ಲೆಡೆ ಒದಗಿಸಿದರು. ಹಿಂದುಳಿದವರ ಅಭಿವೃದ್ಧಿಗಾಗಿ ಆಯೋಗಗಳನ್ನು ನೇಮಿಸಿದರು. ಆಸ್ತಿಯ ಹಕ್ಕನ್ನು ಮೂಲಭೂತಗಳ ಪಟ್ಟಿಯಿಂದ ತೆಗೆದು ಹಾಕಿದರು. ಭ್ರಷ್ಟಾಚಾರದಲ್ಲಿ ತೊಡಗಿದ್ದ ಯಾರೇ ಜನಪ್ರತಿನಿಧಿಗಳಾಗಲೀ ಅವರ ವಿರುದ್ಧ ತನಿಖೆ ನಡೆಸಿದರು. ಶೋಷಕರು, ಬಡವರ ಏಳ್ಗೆಗಾಗಿ, ಸಮಾನತೆಗಾಗಿ ಹೋರಾಡಿದರು. ಸತ್ಯ, ಅಹಿಂಸೆ, ತ್ಯಾಗ, ಶಿಸ್ತು, ಸಂಯಮಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ದೇಶದ ಸೇವೆಯನ್ನು ಮಾಡಿದ್ದಾರೆ ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ.ಕಂಟೆಗೋಳ್ ಮಾತನಾಡಿ, ಮೊರಾರ್ಜಿ ದೇಸಾಯಿಯವರಿಗೆ ಬಾಲ್ಯದಿಂದಲೇ ಉತ್ತಮ ಶಿಕ್ಷಣ, ಸಂಸ್ಕಾರ, ಸಂಸ್ಕøತಿ, ರಾಷ್ಟ್ರಪ್ರೇಮದಂತಹ ಮುಂತಾದ ನೈತಿಕ ಮೌಲ್ಯಗಳು ದೊರೆತವು. ಶಾಲೆಯ ಬಿಡುವಿನ ವೇಳೆಯಲ್ಲಿ ಪಶುಪಾಲನೆ, ಹೊಲ-ಗದ್ದೆಗಳಲ್ಲಿ ಕಳೆ ಕೀಳುವುದು ಮುಂತಾದ ಕಾರ್ಯಗಳನ್ನು ಮಾಡುತ್ತಿದ್ದರು. ಬ್ರಿಟಿಷ್‍ರ ದಾಸ್ಯದಲ್ಲಿರುವ ದೇಶದ ಸ್ವಾತಂತ್ರ್ಯಕ್ಕಾಗಿ ಉಗ್ರ ಹೋರಾಟ ಮಾಡಬೇಕೆಂಬ ಭಾವನೆ ಆಗಿನಿಂದಲೇ ಮೊಳಕೆಯೊಡಿಯಿತು. ಗಾಂಧಿಜಿಯವರ ವಿಚಾರಧಾರೆಗಳಿಂದ ಆಕರ್ಷಿತರಾಗಿ ಖಾದಿ ಧರಿಸಿದರು. ‘ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ಜೇಲುವಾಸ ಅನುಭವಿಸಿದರು ಎಂದರು.
ಕಾರ್ಯಕ್ರಮದಲ್ಲಿ ಶಿವಯೋಗೆಪ್ಪಾ ಎಸ್.ಬಿರಾದಾರ, ಬಸವರಾಜ ಪೊಲೀಸ್ ಪಾಟೀಲ, ಇಂದುಮತಿ, ಜ್ಯೋತಿ, ದೇವಿಕಾರಾಣಿ ಸೇರಿದಂತೆ ಮತ್ತಿತರರಿದ್ದರು.