ಸಂವಿಧಾನದಿಂದ ಸರ್ವರಿಗೂ ಘನತೆಯ ಬದುಕು: ಡಾ.ಮಾಂಗ್
ಕಾಳಗಿ,ಫೆ.29-ಒಂದು ಕಾಲದಲ್ಲಿ ಅತ್ಯಂತ ತುಚ್ಛವಾಗಿ ಕಾಣುತ್ತಿದ್ದ ಮಹಿಳೆಯರು ಮತ್ತು ಶೋಷಿತ ಸಮಾಜ ಸೇರಿದಂತೆ ಪ್ರತಿಯೊಬ್ಬರು ಇಂದು ಘನತೆಯಿಂದ ಬದುಕಲು ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ ಎಂದು ಕೋಡ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಡಾ.ರಾಜಶೇಖರ ಮಾಂಗ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಸಮಾಜ ಕಲ್ಯಾಣ ಇಲಾಖೆ ಯ ಆಶ್ರಯದಲ್ಲಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನ ಕೇವಲ ಒಂದು ಸಮುದಾಯ, ಜನಾಂಗಕ್ಕೆ ಸೀಮಿತವಲ್ಲ. ಇಡೀ ಭಾರತೀಯರ ಏಳಿಗೆ, ಅಭಿವೃದ್ಧಿ ಮತ್ತು ಹಿತವನ್ನು ಅದು ಬಯಸುವುದರ ಜೊತೆ ಸಮಾನತೆ, ಸಹಬಾಳ್ವೆ ಮತ್ತು ಏಕತೆಯನ್ನು ಮೂಡಿಸುವ ಶ್ರೇಷ್ಠ ಗ್ರಂಥವಾಗಿದೆ ಎಂದು ಹೇಳಿದರು.
ಬಾಬಾ ಸಾಹೇಬರ ದೂರದೃಷ್ಟಿ, ಆಳವಾದ ಅಧ್ಯಯನದ ಫಲವಾಗಿ ರೂಪುಗೊಂಡ ಸಂವಿಧಾನವನ್ನು ಎಲ್ಲಾ ಸಮುದಾಯವರು,ವಿದ್ಯಾರ್ಥಿಗಳು ಓದಬೇಕು.ವಿಶೇಷವಾಗಿ ಮಹಿಳೆಯರು ಉನ್ನತ ಸ್ಥಾನಕ್ಕೆ ಏರಲು ಸಂವಿಧಾನ ವರದಾನವಾಗಿದೆ.ಆದ್ದರಿಂದ ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕೆಂದು ಕರೆ ನೀಡಿದರು.
ಶಿಕ್ಷಕ ಶಿವಾನಂದ ಬೀಳಗಿ ಮಾತನಾಡಿ ಭಾರತದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನವಾಗಿದ್ದು ಅದರಲ್ಲಿ ಎಲ್ಲರ ಹಿತ ಅಡಗಿದೆ ಎಂದರು.ಶಿಕ್ಷಕ ರಾಮಕೃಷ್ಣ ವಿಶೇಷ ಉಪನ್ಯಾಸ ನೀಡಿದರು.
ರಟಕಲ ಠಾಣೆಯ ಎ ಎಸ್ ಐ, ನಾಗೇಂದ್ರಪ್ಪ ,ನಿಲಯ ಪಾಲಕ ಶಿವಕುಮಾರ್ ಹಿರೇಮಠ, ಶಿಕ್ಷಕರಾದ ಅಶೋಕ ಹಡಪದ,ತುಕಾರಾಮ ರಾಠೋಡ,ಮರೆಪ್ಪ ಸುರಪುರ,ಬಸವರಾಜ, ಭಾಗ್ಯಶ್ರೀ,ಶಾಲಾ ಶಿಕ್ಷಣ ಮಂತ್ರಿ ಸೌಮ್ಯ ರೆಡ್ಡಿ ವೇದಿಕೆಯ ಮೇಲಿದ್ದರು.
ಸ್ನೇಹಾ ರಮೇಶ ಸಂವಿಧಾನ ಪ್ರಸ್ತಾವನೆ ಬೋಧಿಸಿದರೆ ಪ್ರಜ್ಞಾ ನಿರೂಪಿಸಿದರು.ಅಶ್ವಿನಿ ಸ್ವಾಗತಿಸಿದರು.ಕೊನೆಯಲ್ಲಿ ಸೌಜನ್ಯ ವಂದಿಸಿದರು. ವಿದ್ಯಾರ್ಥಿನಿಯರಿಂದ ಬಾಬಾ ಸಾಹೇಬರ ಕುರಿತು ಹಾಡುಗಳು ಹಾಗೂ ಲಂಬಾಣಿ ನೃತ್ಯ ಪ್ರದರ್ಶನ ನಡೆಯಿತು. ಇದಕ್ಕೂ ಮುಂಚೆ ಸಂವಿಧಾನ ಜಾಗೃತಿ ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.