ಆರೋಗ್ಯ ಇಲಾಖೆ ನೌಕರರ ಸಮಸ್ಯೆಗೆ ಸ್ಪಂದನೆ
ಬೀದರ್: ಫೆ.29:ಇಲ್ಲಿಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಜಿಲ್ಲಾ ಶುಶ್ರೂಷಕರ ತರಬೇತಿ ಕೇಂದ್ರದಲ್ಲಿ ನಡೆದ ನೌಕರರ ಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನಿರಗುಡೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿದರು.
ಆರೋಗ್ಯ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇರುವ ಕಾರಣ ಕೆಲಸದ ಒತ್ತಡ ಹೆಚ್ಚಾಗಿದೆ. ಹೀಗಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಪ್ರತಿ ತಿಂಗಳ 5ನೇ ದಿನಾಂಕದೊಳಗೆ ಬ್ಯಾಂಕ್ ಖಾತೆಗೆ ವೇತನ ಜಮೆ ಮಾಡಬೇಕು. ಕೆಲ ಮೇಲಧಿಕಾರಿಗಳಿಂದ ಸಿಬ್ಬಂದಿಗೆ ಆಗುತ್ತಿರುವ ಅನಗತ್ಯ ಕಿರುಕುಳ ತಪ್ಪಿಸಬೇಕು ಎಂದು ಅನೇಕರು ಮನವಿ ಮಾಡಿದರು. ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು ವಿವಿಧ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ನೌಕರರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ನಿರಗುಡೆ ಭರವಸೆ ನೀಡಿದ್ದಾರೆ ಎಂದು ನೌಕರರ ಸ್ಪಂದನದ ಅಧ್ಯಕ್ಷತೆ ವಹಿಸಿದ್ದ ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಮಾಳಗೆ ತಿಳಿಸಿದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ. ಕಿರಣ ಪಾಟೀಲ, ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣಪ್ಪ ಮುಡಬಿ, ಕುಟುಂಬ ಕಲ್ಯಾಣ ಅಧಿಕಾರಿ ಡಾ. ದಿಲೀಪಕುಮಾರ ಡೊಂಗರೆ, ಆರೋಗ್ಯ ಇಲಾಖೆಯ ಎಲ್ಲ ವೃಂದ ಸಂಘಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಖಚಾಂಚಿಗಳು ಇದ್ದರು.