ನಾಳೆ ತಾಲೂಕಾಮಟ್ಟದ ಬಣಜಿಗರ ಬೃಹತ್ ಸಮಾವೇಶ
ಬಾದಾಮಿ,ಫೆ29: ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ(ರಿ)ದ ತಾಲೂಕಾ ಘಟಕದ ವತಿಯಿಂದ ಬಣಜಿಗರ ಬೃಹತ್ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭವನ್ನು ನಾಳೆ(ಮಾ.1) ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಗರದ ಕೆ.ಎಂ.ಪಟ್ಟಣಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕಾ ಅಧ್ಯಕ್ಷ ಡಾ.ಅವಿನಾಶ ಮಮದಾಪೂರ ತಿಳಿಸಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶಿರೋಳ ರಾಮಾರೂಡಮಠದ ಶಂಕರಾರೂಡ ಸ್ವಾಮಿಗಳು ಸಾನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸಮಾರಂಭವನ್ನು ಉದ್ಘಾಟಿಸುವರು. ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹಾಗೂ ರಾಮದುರ್ಗ ಶಾಸಕ ಅಶೋಕ ಪಟ್ಟಣ ಶ್ರೀ ಬಸವೇಶ್ವರರ ಭಾವಚಿತ್ರ ಅನಾವರಣ ಮಾಡಲಿದ್ದಾರೆ. ಕಾರಟಗಿಯ ಉಪನ್ಯಾಸಕಿ ಲೀಲಾ ಚಿಚಗಲ್ಲ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಎಸ್.ವಿ.ಪಿ.ಸಂಸ್ಥೆಯ ಚೇರಮನ್ ಎ.ಸಿ.ಪಟ್ಟಣದ, ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಮಹಾದೇವಪ್ಪ ಯಾದವಾಡ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಯುವಮುಖಂಡ ಹೊಳಬಸು ಶೆಟ್ಟರ, ಅಂದಪ್ಪ ಜವಳಿ, ಶರಣಪ್ಪ ಗುಳೇದ, ಚನ್ನಮಲ್ಲಪ್ಪ ಘಟ್ಟದ, ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಣಜಿಗ ಕ್ಷೇಮಾಭಿವೃದ್ದಿ ಸಂಘದ ತಾಲೂಕಾ ಪ್ರಧಾನ ಕಾರ್ಯದರ್ಶಿ, ಪುರಸಭೆ ಸದಸ್ಯ ನಾಗರಾಜ ಕಾಚೆಟ್ಟಿ ಮಾತನಾಡಿ ಬಣಜಿಗ ಸಮಾಜದವರು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲ ರಂಗಗಳಲ್ಲಿ ಮುಂದುವರೆಯಬೇಕು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಸಮಾರಂಭದಲ್ಲಿ ಸುಮಾರು 5000 ಜನ ಸಮಾಜದ ಬಂಧುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು. ಮಾಜಿ ಪುರಸಭೆ ಸದಸ್ಯ ಗಿರೀಶ ಶೆಟ್ಟರ, ರಾಚಣ್ಣ ಪಟ್ಟಣದ ಮಾತನಾಡಿ ಸಮಾಜ ಬಾಂಧವರು ಸಂಘಟಿತರಾಗಿ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಈ ಸಮಾವೇಶದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ತಾಲೂಕಿನ ಗ್ರಾಮೀಣ ಹಾಗೂ ನಗರದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ಸಮಾಜದ ಮುಖಂಡರಾದ ಶಶಿಧರ ಪಟ್ಟಣಶೆಟ್ಟಿ, ಮುತ್ತಣ್ಣ ಚಿನಿವಾಲರ, ಅಪ್ಪಣ್ಣ ಲೋಕಾಪೂರ, ಮುದಕಪ್ಪ ಮಣ್ಣೂರ, ಸಂಜು ಬರಗುಂಡಿ, ಬಸವರಾಜ ಪಟ್ಟಣಶೆಟ್ಟಿ, ಶಿವು ಜಿಗಬಡ್ಡಿ, ಮಂಜು ಕಲಗುಡಿ, ಚನ್ನಪ್ಪ ಸೊಬರದ ಹಾಜರಿದ್ದರು.