ವೆಂಕಟಗಿರಿ ಗ್ರಾಪಂ:ಮೊದಲ ಹಂತದ ಗ್ರಾಮಸಭೆ
ವಿಜಯಪುರ.ಫೆ೨೯:ಹೋಬಳಿಯ ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಚನ್ನಕೇಶವಸ್ವಾಮಿ ಸಮುದಾಯಭವನದಲ್ಲಿ ಅಧ್ಯಕ್ಷೆ ಎಸ್.ಆಶಾ ಅವರ ಅಧ್ಯಕ್ಷತೆಯಲ್ಲಿ ೨೦೨೩-೨೪ ನೇ ಸಾಲಿನ ಮೊದಲನೇ ಹಂತದ ಗ್ರಾಮಸಭೆ ನಡೆಯಿತು.
ವೆಂಕಟಗಿರಿಕೋಟೆ ಗ್ರಾಮದಲ್ಲಿ ಎರಡು ವಿಭಾಗಗಳಿದ್ದು, ಇಲ್ಲಿನ ಜನರಿಗೆ ನಿವೇಶನ ಹಂಚಿಕೆ ಮಾಡಲು, ಭೂಮಿಯನ್ನು ಮಂಜೂರು ಮಾಡಿಸಿಕೊಂಡು ಹಂಚಿಕೆ ಮಾಡಬೇಕು. ಸ್ಮಶಾನಗಳಿಗೆ ಜಾಗಗಳಿಲ್ಲ. ಒಂದೊಂದು ಸ್ಮಶಾನದಲ್ಲಿ ಇಬ್ಬರನ್ನು ಅಂತ್ಯಸಂಸ್ಕಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ವರದಿಯನ್ನು ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲದೆ ಮಕ್ಕಳು ಕ್ರೀಡಾಚಟುವಟಿಕೆಗಳಿಂದ ಹಿಂದುಳಿಯುತ್ತಿದ್ದಾರೆ.
ಪಠ್ಯಶಿಕ್ಷಣಕ್ಕಿಂತ ಕ್ರೀಡಾ ಚಟುವಟಿಕೆಗಳತ್ತ ಪೋಷಕರು ಒಲವು ತೋರಿಸುತ್ತಿದ್ದಾರೆ. ಸರ್ಕಾರ, ಪಂಚಾಯಿತಿಗೊಬ್ಬ ದೈಹಿಕ ಶಿಕ್ಷಕರನ್ನು ನೇಮಕ ಮಾಡಿ, ಒಂದೊಂದು ದಿನ ಒಂದೊಂದು ಶಾಲೆಯ ಮಕ್ಕಳಿಗೆ ತರಬೇತಿ ನೀಡುವಂತೆ ಕ್ರಮ ಕೈಗೊಳ್ಳಬೇಕು. ಹಿಂದಿ ಶಿಕ್ಷಕರನ್ನೂ ನೇಮಕ ಮಾಡಬೇಕು.
ಪಂಚಾಯಿತಿ ವ್ಯಾಪ್ತಿಯಲ್ಲಿನ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಮನೆಗಳಿಲ್ಲವೆಂದು ಪ್ರತಿಯೊಂದು ಗ್ರಾಮಸಭೆಗಳಲ್ಲೂ ಪದೇ ಪದೇ ಮನವಿಗಳು ಸಲ್ಲಿಸುತ್ತಲೇ ಇದ್ದೇವೆ. ಇದುವರೆಗೂ ಏನೂ ಪ್ರಯೋಜನವಾಗಿಲ್ಲವೆಂದು ಗ್ರಾಮಸಭೆಯಲ್ಲಿ ಹಾಜರಿದ್ದ ನಾಗರಿಕರು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಒತ್ತಾಯಿಸಿದರು.
ಸರ್ಕಾರ ತೋಟಗಾರಿಕೆ ಇಲಾಖೆಯ ಮೂಲಕ ತೋಟಗಳಿಗೆ ಔಷಧಿಗಳು ಸಿಂಪಡಣೆ ಮಾಡಲು ಬೂಮರ್ ಗಳನ್ನು ವಿತರಣೆ ಮಾಡುತ್ತಿದ್ದು, ಟ್ರ್ಯಾಕ್ಟರ್ ಗಳನ್ನು ಇಟ್ಟುಕೊಂಡಿರುವ ರೈತರಿಗೆ ಮಾತ್ರವೇ ನೀಡುತ್ತಿದೆ. ಇದರಿಂದ ಏನೂ ಪ್ರಯೋಜನವಾಗುತ್ತಿಲ್ಲ. ಮಿನಿಟ್ರ್ಯಾಕ್ಟರ್ ಗಳನ್ನು ಇಟ್ಟುಕೊಂಡಿರುವ ರೈತರಿಗೆ ಬೂಮರ್ ಗಳು ವಿತರಣೆ ಮಾಡುವ ವ್ಯವಸ್ಥೆಯಾಗಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ ಒತ್ತಾಯಿಸಿದರು.
ತಾಲ್ಲೂಕಿನಲ್ಲಿನ ಕೆಲವು ಗ್ರಾಮ ಪಂಚಾಯಿತಿಗಳಿಗೆ ಉತ್ತಮ ಆದಾಯವಿದೆ. ತೆರಿಗೆಯೂ ಹೆಚ್ಚು ವಸೂಲಿಯಾಗುತ್ತಿದ್ದು, ವರ್ಗ-೧ ರಲ್ಲಿ ಕೋಟ್ಯಾಂತರ ರೂಪಾಯಿಗಳ ಅನುದಾನ ಖರ್ಚಾಗದೇ ಉಳಿದಿರುತ್ತದೆ. ಇಂತಹ ಅನುದಾನವನ್ನು ಆರ್ಥಿಕವಾಗಿ ಶಕ್ತಿಯಿಲ್ಲದ ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸಿದರೆ, ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗುತ್ತಿರುವ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಭೂಮಿಗಳಿಗೆ ಸಂಬಂಧಿಸಿದ ನೋಂದಣಿ ಶುಲ್ಕದಲ್ಲಿ ಶೇ ೨ ರಷ್ಟು ಆಯಾ ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸುವಂತಹ ವ್ಯವಸ್ಥೆ ಜಾರಿಯಾಗಬೇಕು. ಕೂಸಿನ ಮನೆ ತೆರೆಯಲಾಗುತ್ತಿದ್ದು, ಪ್ರತಿಯೊಂದು ಹಳ್ಳಿಗೊಂದರಂತೆ ತೆರೆಯಬೇಕು. ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಮಾತ್ರ ತೆರೆದರೆ, ಮಕ್ಕಳ ತಾಯಂದಿರಿಗೆ ಕಷ್ಟವಾಗಲಿದೆ ಎಂದು ಸದಸ್ಯ ಆರ್.ಅಮರನಾಥ್ ಒತ್ತಾಯಿಸಿದರು.
ನೋಡಲ್ ಅಧಿಕಾರಿ ಬಿ.ವಿ.ಮಹೇಶ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಶ್ವನಾಥಾಚಾರ್, ಕಾರ್ಯದರ್ಶಿ ವಿ.ಪ್ರಜ್ವಲ್, ಸದಸ್ಯರಾದ ಹೆಚ್.ಶ್ರೀನಿವಾಸ್, ಮುನಿರತ್ನಮ್ಮ, ಎಂ.ಮಾರಪ್ಪ, ರೋಷನ್ ತಾಜ್, ಸರೋಜಮ್ಮ, ಎಸ್.ನಾಗರಾಜ್, ಸಿ.ಜಗನ್ನಾಥ್, ಪದ್ಮಾವತಿ, ಎಸ್.ಸುನಂದ, ರೇಖಾ, ಅನಸೂಯ ಇದ್ದರು.