ಪಾಕ್ ಪರ ಘೋಷಣೆಗೆ ಖಂಡನೆ: ಬಿಜೆಪಿ ಯುವಮೋರ್ಚ ಬಂಧನ, ಬಿಡುಗಡೆ
ಸಂಜೆವಾಣಿ ನ್ಯೂಸ್
ಮೈಸೂರು: ಫೆ.29:- ವಿಧಾನಸೌಧದ ಒಳಗೆ ನಿನ್ನೆ ಪಾಕ್ ಪರ ಘೋಷಣೆ ಕೂಗಿದ ಘಟನೆಯಲ್ಲಿ ಕಾಂಗ್ರೆಸ್ ನಡೆಯನ್ನು ಖಂಡಿಸಿ ಮೈಸೂರಿನ ಕಾಂಗ್ರೆಸ್ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ನಗರ ಪೆÇಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ನಂಜರಾಜ ಬಹದ್ದೂರ್ ಛತ್ರದ ಬಳಿಯಿಂದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ವೃತ್ತದತ್ತ ಸಾಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿತ್ತು. ನೂತನ ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರಿಂದ ಮೊಳಗಿದ್ದ ಪಾಕಿಸ್ತಾನ ಪರ ಘೋಷಣೆಗೆ ಕಿಡಿಕಾರಿದರು.
ದೇಶದ್ರೋಹಿ ಘೋಷಣೆ ಕೂಗಿರುವ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ನಾಯಕರು ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿದರು. ನಾಸೀರ್ ಹುಸೇನ್ ಹಾಗು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ನಂತರ ಪ್ರತಿಭಟನಾಕಾರರು ಕಾಂಗ್ರೆಸ್ ಕಚೇರಿಯತ್ತ ಹೋಗಲು ಯತ್ನಿಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರನ್ನು ಅಡ್ಡಗಟ್ಟಿದ ಪೆÇಲೀಸರು ನೆರೆದಿದ್ದ 50 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಸಿಎಆರ್ ಮೈದಾನಕ್ಕೆ ಕರೆದೊಯ್ದು ಬಿಡುಗಡೆಗೊಳಿಸಿದರು.
ಬಿಜೆಪಿ ಮುಖಂಡ ಕವೀಶ್ ಗೌಡ ಮಾತನಾಡಿ, ದೇಶದ್ರೋಹಿ ಹೇಳಿಕೆ, ಘೋಷಣೆ ಕೂಗುವುದು ಕಾಂಗ್ರೆಸ್ ಬಹಳ ಹಿಂದಿನಿಂದಲೂ ಬಂದಿದೆ. ಅದೇ ಪದ್ಧತಿಯನ್ನು ಈಗ ವಿಧಾನಸೌದದವರೆಗೂ ತಂದಿದ್ದಾರೆ ಇದು ಖಂಡನೀಯ. ಈ ಕೂಡಲೇ ಕೂಗಿದವರ ವಿರುದ್ಧ ಕ್ರಮ ಜರುಗಿಸಬೇಕು. ಸಂಬಂಧಿಸಿದ ಚುನಾಯಿತ ಪ್ರತಿನಿಧಿ ಮಾದ್ಯಮದ ಕ್ಷಮೆಯಾಚಿಸಬೇಕೆಂದರು.
ಯುವಮೋರ್ಚಾ ಅಧ್ಯಕ್ಷ ಕಿರಣ್ ಗೌಡ, ನಗರ ಮಹಿಳಾಧ್ಯಕ್ಷೆ ಹೇಮಾನಂದೀಶ್, ಕೃಷ್ಣರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಜೋಗಿಮಂಜು, ಚೇತನ್, ಜಗದೀಶ್ ಇನ್ನೂ ಮೊದಲಾದವರು ಉಪಸ್ಥಿತರಿದ್ದರು.