ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಫೆ.29:- ಧಾನ್ ಫೌಂಡೇಶನ್ ನೇತೃತ್ವದಲ್ಲಿ ಪಟ್ಟಣದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ನಡೆಯಿತು.
ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಮಂಡ್ಯ ಮೈಸೂರು, ವೈದ್ಯಾಧಿಕಾರಿಗಳು ಮತ್ತು ನೇತ್ರಾಧಿಕಾರಿ ಸಿಬ್ಬಂದಿ ವರ್ಗ ಪಿರಿಯಾಪಟ್ಟಣ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು 60 ಮಂದಿಯನ್ನು ಶಸ್ತ್ರಚಿಕಿತ್ಸೆಗೆ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಗೆ ಕಳಿಸಿಕೊಡಲಾಯಿತು.
ಈ ವೇಳೆ ಧಾನ್ ಫೌಂಡೇಶನ್ ಆರ್ಥಿಕ ಸಾಕ್ಷರತಾ ಯೋಜನೆಯ ಪ್ರಾದೇಶಿಕ ವ್ಯವಸ್ಥಾಪಕರಾದ ನಾರಾಯಣ ಹೆಗಡೆ ಅವರು ಮಾತನಾಡಿ ಸಂಸ್ಥೆ ವತಿಯಿಂದ ಮಹಿಳಾ ಸಬಲೀಕರಣಕ್ಕಾಗಿ ಸ್ವ ಸಹಾಯ ಸಂಘಗಳ ರಚನೆ ಜೊತೆಗೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಬದಲಾವಣೆಗೆ ಶ್ರಮಿಸಲಾಗುತ್ತಿದೆ, ಕಣ್ಣಿನ ಆರೋಗ್ಯದ ಹಿತದೃಷ್ಟಿಯಿಂದ ಉಚಿತವಾಗಿ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಸಹಯೋಗದೊಂದಿಗೆ ಶಿಬಿರ ಹಮ್ಮಿಕೊಂಡಿದ್ದು ಸಹಕರಿಸಿದ ಎಲ್ಲರಿಗೂ ಸಂಸ್ಥೆಯ ವತಿಯಿಂದ ಧನ್ಯವಾದ ತಿಳಿಸಿ ಮುಂಬರುವ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಮತ್ತಷ್ಟು ಆಯೋಜಿಸುವುದಾಗಿ ತಿಳಿಸಿದರು.
ಮಸಣಿಕಮ್ಮ ಮಹಿಳಾ ಕಳಂಜಿಯ ಒಕ್ಕೂಟದ ಅಧ್ಯಕ್ಷೆ ಲತಾ ಅವರು ಮಾತನಾಡಿ ಒಕ್ಕೂಟದ ಸದಸ್ಯರು ಮತ್ತು ಕುಟುಂಬದವರ ಆರೋಗ್ಯ ಹಿತ ದೃಷ್ಟಿ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಧಾನ್ ಫೌಂಡೇಶನ್ ನೇತೃತ್ವದಲ್ಲಿ ಉಚಿತವಾಗಿ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ಒಕ್ಕೂಟದ ನಿರ್ದೇಶಕರಾದ ಗಿರಿಜಾ, ಜ್ಯೋತಿ, ಮುಖಂಡರಾದ ಬಿ.ಟಿ ಸ್ವಾಮಿ, ಶಂಕರ ಆಸ್ಪತ್ರೆಯ ಶಿಬಿರ ವ್ಯವಸ್ಥಾಪಕ ಶಂಕರಮೂರ್ತಿ, ಡಾ.ಅನಾಮಿಕ, ಸಿಬ್ಬಂದಿ ಸುನಿಲ್ ಕುಮಾರ್, ಸದೃಢ ಚಾರಿಟೇಬಲ್ ಟ್ರಸ್ಟ್ ನ ಮಂಜುನಾಥ್, ಆರೋಗ್ಯ ಇಲಾಖೆಯ ರವಿಶಂಕರ್, ಧಾನ್ ಫೌಂಡೇಶನ್ ಆರೋಗ್ಯ ಕಾರ್ಯಕರ್ತೆ ಮಂಜುಳಾ, ಸಿಬ್ಬಂದಿ ಶೋಭಾ, ವಿನೋದ, ರಮ್ಯಾ, ಮಮತಾ, ಮಂಜು, ಮಾದಯ್ಯ, ಶಿವಮೂರ್ತಿ, ರಜಿಯಾ, ವಿ.ಸುಮಿತ್ರ, ಹರ್ಷಿತ, ಲಕ್ಷ್ಮಿ, ಚಂದ್ರಕಲಾವತಿ, ಶಾಂತಿ, ಮೈನಾ, ಸಿಂಧು, ಸುಮಿತ್ರ, ಪವಿತ್ರ ಇದ್ದರು.