ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ಖಂಡಿಸಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಫೆ.29:- ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಬೇಡ ಎಂದು ಹೇಳಿಕೆ ನೀಡಿದ್ದ ಜಿ.ಟಿ.ದೇವೇಗೌಡರ ವಿರುದ್ಧ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯಿಂದ ಜಲದರ್ಶಿನಿ ಜಿ.ಟಿ.ದೇವೇಗೌಡರ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಜಿ.ಟಿ.ದೇವೇಗೌಡ ಅವರು ವಿಧಾನಸಭೆ ಕಲಾಪದಲ್ಲಿ ಸಹಕಾರ ಸಂಘದಲ್ಲಿ ಎಸ್ಸಿ, ಎಸ್ಟಿ, ಮಹಿಳೆಯರಿಗೆ ಮೀಸಲಾತಿ ನೀಡಬಾರದು ಎಂದು ಹೇಳಿಕೆ ನೀಡಿರುವುದು ಖಂಡನೀಯ. ಸಂವಿಧಾನ, ಮೀಸಲಾತಿ, ದಲಿತ ವಿರೋಧಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ನೀವು ದಲಿತ ವಿರೋಧಿಗಳಾಗಿ ವರ್ತಿಸುತ್ತಿದ್ದೀರಿ. ಜಾತ್ಯಾತೀತ ಎನ್ನುವ ನಾಮಾಂಕಿತ ಪಕ್ಷದ ನೀವು ಅಧಿಕಾರ ದಾಹಕ್ಕಾಗಿ ಕೋಮುವಾದಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೀರಿ. ನಿಮ್ಮ ಗೋಸುಂಬೆ ಆಟಗಳನ್ನು ಕೂಡಲೇ ನಿಲ್ಲಿಸಲಿ ಎಂದು ಕಿಡಿ ಕಾರಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದಲಿತರ ಉದ್ದಾರದ ಮಾತುಗಳನ್ನಾಡುತ್ತಿದ್ದೀರಿ. ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗುವುದನ್ನು ತಪ್ಪಿಸಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಖರ್ಗೆ, ಪರಮೇಶ್ವರ್ ಬಗ್ಗೆಯಾಗಲಿ, ದಲಿತರ ಬಗ್ಗೆಯಾಗಲಿ ಮಾತನಾಡುವ ಯಾವ ನೈತಿಕತೆಯೂ ನಿಮಗಿಲ್ಲ. ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ತರುವ ವಿಧೇಯಕವನ್ನು ರಾಜ್ಯ ಸರ್ಕಾರ ಮಂಡಿಸಿದಾಗ ದಲಿತರು ಸಹಕಾರ ಸಂಘಗಳಲ್ಲಿ ಸದಸ್ಯರಾಗುವುದನ್ನು ಸಹಿಸದೆ ಮೀಸಲಾತಿ ವಿರೋಧಿಸಿದ್ದೀರಿ. ಹಿಂದುಳಿದವರಿಗೆ ಮೀಸಲಾತಿ ಬೇಡ ಎನ್ನುವ ನೀವು ಅವರ ಮತ ಬೇಡ ಎಂದು ಘೋಷಿಸಿ. ಕೂಡಲೇ ನೀವು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನೀವು ಭಾಗವಹಿಸುವ ಎಲ್ಲಾ ಕಾರ್ಯಗಳಿಗೂ ಮುತ್ತಿಗೆ ಹಾಕಿ ಘೇರಾವ್ ಹಾಕುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಜಿ.ಪಂ ಮಾಜಿ ಸದಸ್ಯ ಮರಿಗೌಡ, ಕೆ.ಆರ್.ಗೋಪಾಲಕೃಷ್ಣ, ಡೈರಿ ವೆಂಕಟೇಶ್, ದ್ಯಾವಪ್ಪ ನಾಯಕ ಸೇರಿದಂತೆ ಹಲವರು ಭಾಗವಹಿಸಿದ್ದರು.