ದೃಶ್ಯಬೆಳಕು ಸಂಸ್ಥೆಗೆ 10 ನೇ ವಾರ್ಷಿಕೋತ್ಸವ : ಮಾ. 2,3ರಂದು ಗೌರವ ಪುರಸ್ಕಾರ, ಪ್ರಶಸ್ತಿ ಪ್ರದಾನ
ಕಲಬುರಗಿ:ಫೆ.28: ನಗರದ ರಂಗಾಯಣದ ಕಲಾಗ್ಯಾಲರಿಯಲ್ಲಿ ಮಾರ್ಚ್ 2 ಮತ್ತು 3ರಂದು ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆಯ ಹತ್ತನೇ ವಾರ್ಷಿಕೋತ್ಸವವನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ ಕಲಾ ಪ್ರದರ್ಶನ, ಕಲಾ ಶಿಬಿರ, ಭಾವಚಿತ್ರ ಪ್ರಾತ್ಯಕ್ಷಿಕೆ, ವಿಶೇಷ ಸನ್ಮಾನ, ದೃಶ್ಯಬೆಳಕು ಪ್ರಶಸ್ತಿಯನ್ನು ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಪಿ. ಪರಶುರಾಮ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯದ ಅಲ್ಲದೆ ದೇಶದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ 50ಕ್ಕೂ ಹೆಚ್ಚು ಕಲಾವಿದರ ಚಿತ್ರ-ಶಿಲ್ಪ ಮತ್ತು ಛಾಯಾಚಿತ್ರಗಳು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪ್ರದರ್ಶನಗೊಳ್ಳಲಿವೆ ಎಂದರು.
ಮಾರ್ಚ್ 2ರಂದು ಬೆಳಿಗ್ಗೆ 10-30ಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ. ಸುರೇಶ್ ಜಂಗೆ ಅವರು ಕಲಾಪ್ರದರ್ಶನವನ್ನು ಉದ್ಘಾಟಿಸುವರು. ಪಾಟೀಲ್ ಗ್ರೂಪ್ ಆಫ್ ಇಂಡಸ್ಟ್ರಿಸ್‍ನ ಮುಖ್ಯಸ್ಥ ಸಿದ್ದು ಎಸ್. ಪಾಟೀಲ್ ಕಡಗಂಚಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಭಿನ್ನ ಮಾಧ್ಯಮದ ಅತ್ಯುತ್ತಮವಾದ ಚಿತ್ರಕಲಾಕೃತಿಗಳನ್ನು 10ನೆಯ ವಾರ್ಷಿಕ ಕಲಾಪ್ರದರ್ಶನದ ಅಂಗವಾಗಿ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು. ನಗರದ ವಾಣಿಜ್ಯೊದ್ಧಿಮಿಗಳು, ಕೈಗಾರಿಕೋದ್ಯಮಿಗಳು, ಇಂಜೀನಿಯರ್ಸ್‍ಗಳು, ವೈದ್ಯರು, ಕಲಾಸಕ್ತರು ಈ ಕಲಾಪ್ರದರ್ಶನಕ್ಕೆ ಆಗಮಿಸಿ ಕಲಾಕೃತಿಗಳನ್ನು ಖರೀದಿಸಿ, ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
ಇದೆ ಸಂದರ್ಭದಲ್ಲಿ ಎರಡು ದಿನಗಳ ಕಲಾಶಿಬಿರವನ್ನು ಹಮ್ಮಿಕೊಂಡಿದ್ದು, ಕಲಾಶಿಬಿರದ ಉದ್ಘಾಟನೆಯನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಂಯೋಜಕ ಡಾ. ಶಿವಾನಂದ್ ಬಂಟನೂರ್ ಅವರು ಉದ್ಘಾಟಿಸಲಿದ್ದಾರೆ. ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಅವರು ತಿಳಿಸಿದರು.
ಚಿತ್ರಕಲಾವಿದ ನಿಂಗನಗೌಡ ಸಿ. ಪಾಟೀಲ್ ಅವರು ಶಿಬಿರದ ಸಂಚಾಲಕತ್ವನ್ನು ವಹಿಸಲಿದ್ದಾರೆ. ಕಲಾ ಶಿಬಿರದಲ್ಲಿ ಬಸವನಬಾಗೇವಾಡಿಯ ಅಮಿತ್ ಕಮ್ಮಾರ್, ಆಳಂದ್‍ನ ಮಲ್ಲಪ್ಪ ಸಿ. ಡೋಲೆ, ಅಫಜಲಪುರದ ಶಫೀಕ್ ಮಾಶ್ಯಾಳಕರ್, ಮೈಸೂರಿನ ಎಂ.ಎಸ್. ರಾಘವೇಂದ್ರ, ಕೊಪ್ಪಳ್‍ದ ಟಿ.ಎನ್. ಜಾಲಿಹಾಳ್, ಮಹಾರಾಷ್ಟ್ರದ ಪ್ರಶಾಂತ್ ಕುವರ್, ಕಲಬುರ್ಗಿಯ ಗುರುಲಿಂಗ್ ಅರಳಿ, ಮಂಡ್ಯದ ಸ್ವಾದೀಶ್ ಕೆ.ಎಸ್, ವಿಜಯಪುರದ ಸಂತೋಷ್ ಹಿರೇಮಠ್, ರಾಯಚೂರಿನ ಗೋಪಾಲ್, ಕಲಬುರ್ಗಿಯ ಅಭಿಜಿತ್ ಎಸ್.ಕೆ., ಶ್ರೀಮತಿ ಶೋಭಾ ಚೌಧರಿ ಅವರು ಭಾಗವಹಿಸಿ ತಲಾ ಒಂದೊಂದು ಕಲಾಕೃತಿಗಳನ್ನು ರಚಿಸುವರು ಎಂದು ಅವರು ಹೇಳಿದರು.
ಮಾರ್ಚ್ 2ರಂದು ಸಾಯಂಕಾಲ 4 ಗಂಟೆಗೆ ದೃಶ್ಯಬೆಳಕು ಗೌರವ ಪುರಸ್ಕಾರಕ್ಕೆ ಭಾಜನರಾದ ಹಿರಿಯ ಚಿತ್ರಕಲಾವಿದ ಡಾ. ಬಾಬುರಾವ್ ನಡೋಣಿ ಅವರು ಭಾವಚಿತ್ರ ಪ್ರಾತ್ಯಕ್ಷಿಕೆ ನಡೆಸಿ ಕೊಡಲಿದ್ದಾರೆ. ಸಂಸ್ಥೆಯು 2023-2024ನೇ ಸಾಲಿನ ‘ದೃಶ್ಯಬೆಳಕು ಗೌರವ ಪುರಸ್ಕಾರ’ಕ್ಕೆ ನಾಡಿನ ಹೆಸರಾಂತ ಖ್ಯಾತ ಚಿತ್ರಕಲಾವಿದ ಡಾ. ಬಾಬುರಾವ್ ನಡೋಣಿ ಅವರಿಗೆ ಆಯ್ಕೆ ಮಾಡಿದೆ. ದೃಶ್ಯಬೆಳಕು ಗೌರವ ಪುರಸ್ಕಾರವು 6,000ರೂ.ಗಳ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣೆಕೆಯನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು.
ಸಂಸ್ಥೆಯು 10ನೇ ವಾರ್ಷಿಕ ಕಲಾಸ್ಪರ್ಧೆ ಏರ್ಪಡಿಸಿ, ಕಲಾಸ್ಪರ್ಧೆಯಲ್ಲಿ ವಿಜೇತರಾದ ಆರು ಜನ ಚಿತ್ರ-ಶಿಲ್ಪ ಮತ್ತು ಛಾಯಾಚಿತ್ರ ಕಲಾವಿದರಿಗೆ ‘ದೃಶ್ಯಬೆಳಕು’ ಪ್ರಶಸ್ತಿ ನೀಡುತ್ತದೆ. ದೃಶ್ಯಬೆಳಕು ಪ್ರಶಸ್ತಿಯು 6,000ರೂ.ಗಳ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಈ ಸಾಲಿನ 10ನೆಯ ವಾರ್ಷಿಕ ‘ದೃಶ್ಯಬೆಳಕು’ ಪ್ರಶಸ್ತಿಗೆ ಕಲಬುರ್ಗಿಯ ಜಗದೀಶ್ ಎಂ. ಕಾಂಬಳೆ, ದಾವಣಗೆರೆಯ ಸಬ್ರೀನ್ ತಾಜ್ ಕೆ.ಎಸ್., ಕಲಬುರ್ಗಿಯ ಬಿ.ಎನ್. ಪಾಟೀಲ್, ಶಿವಶರಣ್ ಡೊಣ್ಣೂರಕರ್, ರಾಯಚೂರಿನ ಸಿದ್ದರೆಡ್ಡಿ ಯಲ್ಲಪ್ಪ, ಬಾಗಲಕೋಟೆಯ ದಾನಯ್ಯ ಶಿ. ಚೌಕಿಮಠ್ ಅವರು ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು.
ಮಾರ್ಚ್ 3ರಂದು ಮಧ್ಯಾಹ್ನ 4 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಿರಿಯ ಸಾಹಿತಿ ಪ್ರೊ. ಆರ್.ಕೆ. ಹುಡಗಿ ಅವರು ಉದ್ಘಾಟಿಸುವರು. ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ದಿನದರ್ಶಿಕೆ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ್ ಹೂಗಾರ್ ಅವರು ಆಗಮಿಸುವರು. ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕøತರಾದ ಮಹಾದೇವಪ್ಪ ಎಸ್. ಶಿಲ್ಪಿ, ಬಸವರಾಜ್ ಎಲ್. ಜಾನೆ ಅವರು ವಿಶೇಷ ಸನ್ಮಾನಿಸಾಗುವುದು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ಮತ್ತು ನಿರ್ದೇಶಕ ಡಾ. ಎಚ್.ಟಿ. ಪೋತೆ ಅವರು ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದರು.