ಕೆ.ಪಿ.ಎಂ. ಅವರ ಹೋರಾಟ ಹಾಗೂ ಸಮಾಜದ ಮೇಲಿನ ಪ್ರೀತಿ ನಮ್ಮೆಲ್ಲರಿಗೂ ಸ್ಪೂರ್ತಿ: ಮನೋಜ್‍ಪಟೇಲ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ. 29- ಜಿ.ಪಂ. ಮಾಜಿ ಅಧ್ಯಕ್ಷರು, ಕನ್ನಡಪರ ಹೋರಾಟಗಾರರು ಹಾಗೂ ಜನಾನುರಾಗಿ ರಾಜಕಾರಣಿ ಕೆ.ಪಿ. ಮಹದೇವಸ್ವಾಮಿ ಅವರ ಹೋರಾಟದ ಬದುಕು, ಜನರ ಮೇಲೆ ಅವರು ಇಟ್ಟಿದ ಪ್ರೀತಿ ವಿಶ್ವಾಸ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಹಾಗೂ ಕೆಪಿಎಂ ಅವರ ಪುತ್ರ ಮನೋಜ್ ಪಟೇಲ್ ತಿಳಿಸಿದರು.
ನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಶ್ರೀ ಪಾರ್ವತಿ ಬಾಲಾಶ್ರಮದಲ್ಲಿ ಕೆ.ಪಿ. ಮಹದೇವಸ್ವಾಮಿ ಅವರ 68ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಕ್ಕಳಿಗೆ ಸಿಹಿ ಊಟ ಬಿಡಿಸಿ ಅವರು ಮಾತನಾಡಿದರು. ಕೆ.ಪಿ.ಮಹದೇವಸ್ವಾಮಿ ಅವರ ಮಗ ಎನ್ನುವುದೇ ಹೆಮ್ಮೆ. ಗ್ರಾಮಾಂತರ ಪ್ರದೇಶಗಳಲ್ಲಿ ಈಗಲು ಸಹ ಕೆಪಿಎಂ ಅವರ ಬಗ್ಗೆ ಅಪಾರ ಪ್ರೀತಿ ಕಾಳಜಿಯನ್ನು ಹೊಂದಿರುವ ಬಹಳಷ್ಟು ಜನರು ಇದ್ದಾರೆ. ಅವರ ಅರ್ಶೀವಾದ ಮತ್ತು ಜನರು ಅವರ ಮೇಲಿಟ್ಟಿದ್ದ ಪ್ರೀತಿ ವಿಶ್ವಾಸ ಇಂದು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಲು ಸಾಧ್ಯವಾಗಿದೆ. ಹೀಗಾಗಿ ಅವರ ಸ್ನೇಹ ಬಳಗದವರು 68 ನೇ ವರ್ಷದ ಹುಟ್ಟುಹಬ್ಬವನ್ನು ಪಾರ್ವತಿ ಬಾಲಾಶ್ರಮದಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ ಎಂದು ಸ್ಮರಿಸಿಕೊಂಡರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಕೆ.ಪಿ. ಮಹದೇವಸ್ವಾಮಿ ಅವರು ದೊಡ್ಡ ಹೋರಾಟಗಾರರು. ಅವರ ಹೋರಾಟದ ದಿನಗಳು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಸಮಾಜ ಹಾಗು ಬಡವರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು. ಇಂಥವರ ಜನ ದಿನವನ್ನು ಆಚರಣೆ ಮಾಡುತ್ತಿರುವುದು ಹೆಮ್ಮೆ ತಂದಿದೆ. ನಗರಸಭೆ ವ್ಯಾಪ್ತಿಯಲ್ಲಿ ಅವರ ಹೆಸರನ್ನು ಯಾವುದಾದೂ ಒಂದು ರಸ್ತೆ ಹಾಗು ವೃತ್ತಕ್ಕೆ ನಾಮಕರಣ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯ ಮಾಡುತ್ತೇನೆ ಎಂದರು.
ಶಿಕ್ಷಕÀ ಹರವೆ ರಾಜೇಶ್ ಮಾತನಾಡಿ, ಕೆ.ಪಿ. ಮಹದೇವಸ್ವಾಮಿ ಅವರಿಗೆ ಯುವಕರು ಹಾಗೂ ಹೋರಾಟಗಾರರ ಬಗ್ಗೆ ಬಹಳ ಅಭಿಮಾನ ಇತ್ತು. ರಾಜಕೀಯದಲ್ಲಿ ಬಹಳ ಎತ್ತರಕ್ಕೆ ಬೆಳೆಯಬೇಕೆಂಬ ಮಹಾದಾಸೆಯನ್ನು ಹೊಂದಿದ್ದರು. ಅವರ ಹೋರಾಟ ಮತ್ತು ಸೇವೆ ಮನೋಭಾವನೆ, ಸಾಮಾಜಿಕ ಕಳಕಳಿ ಇತರರಿಗೆ ಸ್ಪೂರ್ತಿಯಾಗಿದೆ. ಅವರ ಹುಟ್ಟುಹಬ್ಬವನ್ನು ಬಾಲಾಶ್ರಮದಲ್ಲಿ ಆಚರಣೆ ಮಾಡುವ ಮೂಲಕ ಅವರ ಋಣ ತೀರಿಸುವ ಮತ್ತು ಅಳಿಲು ಸೇವೆಯನ್ನು ಮಾಡುವ ಭಾಗ್ಯ ನಮ್ಮದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಾ. ಪರಮೇಶ್ವರಪ್ಪ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೌರಿಶಂಕರ್, ಮುಖಂಡರಾದ ಆಲೂರು ಮಲ್ಲು, ದೇಶಿಗೌಡಪುರ ಪರಶಿವಮೂರ್ತಿ, ಪತ್ರಕರ್ತ ಮೂಡ್ನಾಕೂಡು ಶಿವರಾಜು, ಜಯಶಂಕರಮೂರ್ತಿ, ಸ್ಟುಡಿಯೋ ಕುಮಾರ್, ವಾರ್ಡನ್ ನಾಗಮ್ಮ ಮೊದಲಾದವರು ಇದ್ದರು.