ಬಳ್ಳೊಳ್ಳಿಯಲ್ಲಿ ಪ್ರಜಾಪ್ರಭುತ್ವ ದಿನ ಆಚರಣೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೬: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕ ಆಡಳಿತ, ತಾಲೂಕ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ ಹಾಗೂ ಇಂಡಿಯ ವಿವಿಧ ಇಲಾಖೆಗಳು ಹಾಗೂ ಚಡಚಣ ತಾಲೂಕಿನ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಅಂಗವಾಗಿ ಭಾನುವಾರ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜೇವೂರ ಸಾಲುಮರದ ತಿಮ್ಮಕ್ಕ ನರ್ಸರಿಯಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಯಿತು.
ಸಂವಿದಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಂವಿಧಾನ ಪೀಠಿಕೆ ವಾಚನ ಮಾಡಿ ಮಾನವ ಸರಪಳಿ ನಿರ್ಮಿಸುವ ಜೊತೆಗೆ ಸಸಿ ನೆಡುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಯಿತು.
ಉಪವಿಭಾಗಾಧಿಕಾರಿ ಆಬೀದ್ ಗದ್ಯಾಳ ಅವರು ಮಾತನಾಡಿ, ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ ಕರ್ನಾಟಕದ ಉತ್ತರ ತುದಿ ಬೀದರ ಜಿಲ್ಲೆಯಿಂದ ದಕ್ಷಿಣ ತುದಿ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿಯನ್ನು ರಚಿಸಿ ಸಂವಿಧಾನ ಪೀಠವನ್ನು ವಾಚನ ಮಾಡುವ ಮೂಲಕ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಹಾಗೂ ಜಾಗತಿಕವಾಗಿ ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊಫೆಸರ್ ಅರಳಿ, ತದ್ದೇವಾಡಿ ಮಹಾತೆಂಶ ಸ್ವಾಮೀಜಿಗಳು ಹಾಗೂ ವಿವಿಧ ಪತ್ರಕರ್ತರು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು, ಎಲ್ಲ ನಾಗರಿಕರು, ಶಾಲಾ ಕಾಲೇಜು, ವಸತಿ ನಿಲಯ ವಿದ್ಯಾರ್ಥಿಗಳು, ಮಹಿಳಾ ಸ್ವಸಹಾಯ ಸಂಘಗಳು, ವಿವಿಧ ಸಂಘ-ಸAಸ್ಥೆಗಳು, ಸಂಘಟನೆಗಳು, ಪತ್ರಿಕೆ ಸಂಘಗಳು, ಸರ್ಕಾರಿ ಸರ್ಕಾರೇತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾನವ ಸರಪಳಿ ರಚನೆಯಲ್ಲಿ ಭಾಗವಹಿಸಿದ್ದರು. ತಾಲೂಕಾ ಪಂಚಾಯತ್ ಕಾರ್ಯನಿವಾಹಕ ಅಧಿಕಾರಿ ಸಂಜಯ್ ಖಡಗೆಕರ ಸ್ವಾಗತಿಸಿದರು. ವಲಯ ಅಧಿಕಾರಿ ಎಸ್.ಜಿ.ಸಂಗಳಕರ್ ವಂದಿಸಿದರು ಧನರಾಜ್ ಮುಜಗೊಂಡ ನಿರೂಪಿಸಿದರು.