ಪ್ರಜಾಪ್ರಭುತ್ವಕ್ಕಾಗಿ ಕೈ ಜೋಡಿಸಿದ ಜನತೆ
ಕೋಲಾರ ಸೆ, 16 – ಕೋಲಾರ ಜಿಲ್ಲೆಯ ಜನರು ನಮ್ಮ ಹೆಮ್ಮೆಯ ಪ್ರಜಾಪ್ರಭುತ್ವ ಬಲಪಡಿಸುವುದಕ್ಕೆ ಕೈ ಜೋಡಿಸಿದರು.ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜಯಘೋಷ ಹಾಕಿ ಸಂಭ್ರಮಿಸಿದರು.
ಹೌದು..! ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯಲ್ಲಿ ಸೆ.೧೫ರಂದು ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ಕಾರ್ಯಕ್ರಮವು ಹೊಸ ಇತಿಹಾಸ ಸೃಷ್ಟಿಸಿತು.
ಪೂರ್ವನಿಗದಿಯಂತೆ ಬೆಳಗಿನ ಅವಧಿಯಲ್ಲಿ ಮಾನವ ಸರಪಳಿ ಕಾರ್ಯವು ಮಾರ್ಗದುದ್ದಕ್ಕೂ ಯಶಸ್ವಿಯಾಗಿ ನೆರವೇರಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸಿ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವ ಕಾರ್ಯಕ್ರಮಕ್ಕೆ ಕೈಜೋಡಿಸಿದರು.
ಚಿಕ್ಕಬಳ್ಳಾಪುರ -ಕೋಲಾರ ಗಡಿಭಾಗದ ಹೆದ್ದಾರಿಯಲ್ಲಿನ ಚೊಕ್ಕಂಡ ಹಳ್ಳಿ ಗ್ರಾಮದಿಂದ ಕೋಲಾರ ನಗರ ಮೂಲಕ ರಾಷ್ಟೀಯ ಹೆದ್ದಾರಿಯಲ್ಲಿ ಜಿಲ್ಲೆಯ ಗಡಿ ರಾಮಸಂದ್ರ ಗೇಟ್ ವರೆಗೆ ಸುಮಾರು ೫೫ ಕಿ.ಮೀ ಉದ್ದ ಮಾನವ ಸರಪಳಿಯನ್ನು ನಿರ್ಮಿಸಿ ಕೋಲಾರ ಜಿಲ್ಲೆಯ ಜನರು ವಿಶ್ವದಾಖಲೆಯ ಭಾಗವಾದರು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅಪರ ಜಿಲ್ಲಾಧಿಕಾರಿಗಳು ನಿರಂತರ ಸಭೆ ನಡೆಸಿ ಅಧಿಕಾರಿಗಳ ತಂಡ ರಚಿಸಿ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದ ಐತಿಹಾಸಿಕ ಮಾನವ ಸರಪಳಿಯಲ್ಲಿ ಜಿಲ್ಲೆಯ ಜನ ಪ್ರತಿನಿಧಿಗಳು, ಗಣ್ಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಎಲ್ಲಾ ಸಂಘ ಸಂಸ್ಥೆಗಳು ಪ್ರತಿನಿಧಿಗಳು, ಕಾರ್ಮಿಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಸಂವಿಧಾನ ಪೀಠಿಕೆ ವಾಚನ
ಕೋಲಾರದ ಗಡಿ ಪ್ರಾರಂಭವಾಗುವ ಚೊಕ್ಕಂಡ ಹಳ್ಳಿ ಗ್ರಾಮದ ಬಳಿ ವೇದಿಕೆ ಕಾರ್ಯಕ್ರಮ ನಡೆಯಿತು. ಇದೆ ವೇಳೆ, ಸಂವಿಧಾನ ಪೀಠಿಕೆಯ ವಾಚನ ಕಾರ್ಯಕ್ರಮಕ್ಕೆ ಗಾಳಿಬುರುಡೆಗಳನ್ನು ಹಾಗೂ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ಜನಾಡಳಿತ ಜಾರಿಗೊಳಿಸಿದ ಪ್ರಜಾಪ್ರಭುತ್ವವು ಅತ್ಯಂತ ದೊಡ್ಡ ಶಕ್ತಿಯಾಗಿದೆ ಎಂದು ತಿಳಿಸಿದರು.
ಎಲ್ಲರಿಗೂ ಸಮಾನವಾಗಿ ಬದುಕುವ ಸ್ವಾತಂತ್ರ್ಯದ ಹಕ್ಕನ್ನು ಸಂವಿಧಾನ ನೀಡಿದೆ ಎಂದರು. ನಮಗೆ ಬೇಕಾದ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಮಹತ್ವದ ಮತದಾನದ ಹಕ್ಕು ಸಂವಿಧಾನ, ಪ್ರಜಾಪ್ರಭುತ್ವದ ಮೂಲಕ ನಮಗೆ ದಕ್ಕಿದೆ ಎಂದು ತಿಳಿಸಿದರು.