ವೈಜ್ಞಾನಿಕ ಸಾಧನೆ ವಿಜ್ಞಾನ ಕೊಡುಗೆ ಅಪಾರ
ಕಲಬುರಗಿ:ಫೆ.28: ಪ್ರತಿಯೊಂದು ಕ್ಷೇತ್ರದಲ್ಲಿ ವೈಜ್ಞಾನಿಕವಾಗಿ ಬೆಳೆಯಲು ವಿಜ್ಞಾನದ ಕೊಡುಗೆ ಅಪಾರವಾಗಿದೆ ಎಂದು ಮುಕ್ತಾಂಬಿಕಾ ವಿಜ್ಞಾನ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಂ.ಆರ್.ಹುಗ್ಗಿ ಅಭಿಪ್ರಾಯಪಟ್ಟರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಜನ ಸಾಮಾನ್ಯರಲ್ಲಿ ವಿಜ್ಞಾನದ ಅರಿವೂ ಪ್ರತಿಯೊಬ್ಬರಲ್ಲಿ ಮೂಡಿಸುವುದೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮೂಲ ಉದ್ದೇಶವಾಗಿದೆ. ಪ್ರತಿ ವರ್ಷ ಫೆಬ್ರವರಿ 28 ರಂದು ಸರ್ ಸಿ.ವಿ.ರಾಮನ್ ಅವರ ರಾಮನ್ ಪರಿಣಾಮ ಅವಿಷ್ಕಾರದ ಸ್ಮರಣಾರ್ಥವಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ರಾಮನ್ ಅವರು ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊಟ್ಟ ಮೊದಲ ವಿಜ್ಞಾನಿ ಎಂಬ ಖ್ಯಾತಿ ಅವರಿಗಿದೆ. ಖ್ಯಾತ ವಿಜ್ಞಾನಿಯಾಗಿದ್ದ ರಾಮನ್ ಅವರ ಕೊಡುಗೆ ಬಹಳಷ್ಟಿದೆ. ವಿಜ್ಞಾನದಿಂದಲೇ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಪ್ರತಿ ದಿನವೂ ಹೊಸ ಹೊಸ ಅವಿಷ್ಕಾರಗಳು ನಡೆದಿರುತ್ತವೆ. ವಿದ್ಯಾರ್ಥಿಗಳು ವಿಜ್ಞಾನ ಬಗ್ಗೆ ಜ್ಞಾನ ಬೆಳೆಸಿಕೊಂಡು ವೈಜ್ಞಾನಿಕವಾಗಿ ಬೆಳೆಯಬೇಕು, ವಿಜ್ಞಾನಿಗಳಾಗಿ ಹೊರ ಹೊಮ್ಮಬೇಕು ಎಂದು ಸಲಹೆ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸೂರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನ ಎಂದರೆ ಅವಿಷ್ಕಾರ, ಪ್ರಯೋಗ ಅದರ ಮುಖ್ಯ ಉದ್ದೇಶ. ಭಾರತವು ಚಂದ್ರಯಾನ, ಸೂರ್ಯಯಾನ ಮಾಡುವುದರ ಮೂಲಕ ಜಗತ್ತಿಗೆ ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿದ್ದನ್ನು ತೋರಿಸಿಕೊಟ್ಟಿದೆ. ವಿಜ್ಞಾನಿಗಳ ಸತತ ಪ್ರಯತ್ನಗಳಿಂದ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಹೊಸ ಹೊಸ ಸಂಶೋಧನೆಯಲ್ಲಿ ತೊಡಿಗಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ವೇದಿಕೆ ಮೇಲೆ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕಿ ಡಾ.ಪುಟ್ಟಮಣಿ ದೇವಿದಾಸ, ವಿದ್ಯಾರ್ಥಿ ಸಂಘದ ಸಲಹೆಗಾರರಾದ ಡಾ.ಸೀಮಾ ಪಾಟೀಲ, ಡಾ.ವಿಜಯಕುಮಾರ ಕುಲಕರ್ಣಿ ಇದ್ದರು.
ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಶ್ವೇತಾ ಗೋಪನೆ ಪ್ರಾಸ್ತಾವಿಕ ಮಾತನಾಡಿದರೆ, ಕುಮಾರಿ ಅನ್ನಪೂರ್ಣ ಮಠ ಸ್ವಾಗತಿಸಿದರು. ಕು.ನಾಗಶ್ರೀ ಎ.ಕೋಣೆ ವಂದಿಸಿದರು. ಕು. ಭಾಗ್ಯವಂತಿ ಎ.ಕೆ. ನಿರೂಪಿಸಿದರು. ವಿಭಾಗದ ಪ್ರಾಧ್ಯಾಪಕರಾದ ಆದರ್ಶ ವಡ್ಡನಕೇರಿ , ಸುರೇಶ ಬಿರಾದಾರ, ಶ್ರೀಮತಿ ಪಾರ್ವತಿ ಬಿ., ಕು.ಪೂಜಾ ಪಾಟೀಲ, ಕು. ಮಹಜಬೀನ ಪಟೇಲ್, ಡಾ.ಶರಣಬಸಮ್ಮ ಅಂಬಲಗಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ವಿಜ್ಞಾನ ಪ್ರತಿಜ್ಞಾ ವಿಧಿ ವಾಚನ ಮಾಡಿಸಲಾಯಿತು.