ಅಕ್ರಮ ನಿವೇಶನ ಸಂಖ್ಯೆ ರದ್ದುಪಡಿಸಲು ಆಯುಕ್ತರ ಆದೇಶ ; ಹೋರಾಟಕ್ಕೆ ಸಂದ ಜಯ; ಮಾಜಿ ಮೇಯರ್ ಉಮಾ ಪ್ರಕಾಶ್

ದಾವಣಗೆರೆ, ಫೆ.23; ಆವರಗೆರೆ ರಿ.ಸ.ನಂ.242,243 ಹಾಗೂ 244ರ ಉಪ ನಂಬರ್‌ಗಳಲ್ಲಿ ದೂಡಾದಿಂದ ಅಂತಿಮ ಮಂಜೂರಾತಿ ಪಡೆದಿದ್ದ ಬಡಾವಣೆಗಳಲ್ಲಿ ನಕ್ಷೆಗಳಲ್ಲಿ ಬಿಟ್ಟಿದ್ದ ಸುಮಾರು 34 ಸಾವಿರ ಅಡಿ ಬಯಲು ಜಾಗವನ್ನು ಪಾಲಿಕೆಯ ಕೆಲ ಅಧಿಕಾರಿಗಳು ಶಾಮೀಲಾಗಿ,2017ಮ ತ್ತು 2018ರಲ್ಲಿ ನೀಡಿದ್ದ ಅಕ್ರಮ ನಿವೇಶನ ಸಂಖ್ಯೆಗಳನ್ನು ಪಾಲಿಕೆ ಆಯುಕ್ತರಾದ ರೇಣುಕಾ ಡಿ.7ರಂದು ರದ್ಧುಪಡಿಸಿ ಆದೇಶ ಹೊರಡಿಸಿದ್ದು, ತಮ್ಮ ಹೋರಾಟಕ್ಕೆ ಸಿಕ್ಕ ಪ್ರತಿಫಲ ಎಂದು 32ನೇ ವಾರ್ಡ್‌ ಬಿಜೆಪಿ ಸದಸ್ಯೆ, ಮಾಜಿ ಮೇಯರ್ ಡಿ.ಎಸ್‌.ಉಮಾ ಪ್ರಕಾಶ ತಿಳಿಸಿದ್ದಾರೆ.ತಮ್ಮ ವಾರ್ಡ್‌ಗೆ 2019ರಲ್ಲಿ ತಾವು 2ನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾದ ನಂತರ ಮೊದಲ ಸಾಮಾನ್ಯ ಸಭೆಯಿಂದಲೂ ಪ್ರತಿ ಸಭೆಯಲ್ಲೂ ಅಕ್ರಮ ಡೋರ್ ನಂಬರ್‌ಗಳ ವಿಷಯವನ್ನು ವಿಷಯ ಪ್ರಸ್ತಾಪಿಸಿ, ಹೋರಾಟ ನಡೆಸಿದ ಪರಿಣಾಮ ಇಂದು ಸುಮಾರು ಹತ್ತಾರು ಕೋಟಿ ಬೆಲೆ ಬಾಳುವ ಜಾಗ ಉಳಿದಂತಾಗಿದ್ದು, ತಮ್ಮ ನಿರಂತರ ಪ್ರಯತ್ನ ಕಡೆಗೂ ಫಲ ನೀಡಿದೆ. ಅಕ್ರಮ ಡೋರ್ ನಂಬರ್, ಅಕ್ರಮ ನಿವೇಶನ, ಭೂಗಳ್ಳತನದ ವಿರುದ್ಧ ತಮ್ಮ ಹೋರಾಟ ನಿರಂತರ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.ಪಾಲಿಕೆ ಉಪ ಆಯುಕ್ತರಾದ ಲಕ್ಷ್ಮಿ, ಸಹಾಯಕ ಕಂದಾಯ ಅಧಿಕಾರಿ ಸುನಿಲ್‌, ಇತರೆ ಅಧಿಕಾರಿಗಳು ಪರಿಶೀಲಿಸಿ, ಅಕ್ರಮ ಡೋರ್ ನಂಬರ್ ನೀಡಿರುವುದನ್ನು ರದ್ಧುಪಡಿಸಲು ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ವರದಿ ನೀಡಿದ್ದರು. ನಂತರ ಬೆಂಗಳೂರು ವಿಭಾಗೀಯ ಆಯುಕ್ತರ ಸೂಚನೆಯಂತೆ ಈ ಅಕ್ರಮ ಡೋರ್ ನಂಬರ್‌ಗಳನ್ನು ರದ್ಧುಪಡಿಸಲು ಆಯುಕ್ತರು ಕ್ರಮ ಕೈಗೊಂಡಿದ್ದಾರೆ. ಅಕ್ರಮ ನಿವೇಶನ ರದ್ಧುಪಡಿಸಲು ಕಾರಣರಾದ ಆಯುಕ್ತರು, ಉಪ ಆಯುಕ್ತರು, ಸಹಾಯಕ ಕಂದಾಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಅಭಿನಂದಿಸುತ್ತೇನೆ ಎಂದು ಅವರು ವಿವರಿಸಿದ್ದಾರೆ.ಡೋರ್ ನಂಬರ್ ರದ್ಧುಪಡಿಸಿದ ಜಾಗದಲ್ಲಿ ಫೆನ್ಸಿಂಗ್ ಅಳವಡಿಸಿ, ಸಾರ್ವಜನಿಕ ಸ್ವತ್ತನ್ನು ಹದ್ದುಬಸ್ತು ಮಾಡಬೇಕು. ಸಾರ್ವಜನಿಕರ ಉಪಯೋಗಕ್ಕೆ ಉದ್ಯಾನವನ ಅಥವಾ ಆಟದ ಮೈದಾನಕ್ಕೆ ಅನುವು ಮಾಡಿಕೊಡಬೇಕು. ಅಕ್ರಮ ಡೋರ್ ನಂಬರ್ ನೀಡಿರುವ ಪಾಲಿಕೆ ಅಧಿಕಾರಿ, ನೌಕರರ ವಿರುದ್ಧ ಸಮಗ್ರ ತನಿಖೆ ಕೈಗೊಂಡು, ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಈ ಬಗ್ಗೆ ಮುಂದಿನ ವಾರ ನಡೆಯಲಿರುವ ಮಹಾ ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಲಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.ಅಕ್ರಮ ನಿವೇಶನಗಳನ್ನು ಬಡಾವಣೆ ನಿರ್ಮಿಸಿದವರೇ ಕೆಲ ಜನರಿಗೆ ಮಾರಾಟ ಮಾಡಿ, ಮೋಸ ಮಾಡಿರುವುದು ತಿಳಿದು ಬಂದಿದೆ. 2-3 ಮನೆಗಳನ್ನೂ ಕಟ್ಟಿ, ಮಾರಾಟ ಮಾಡಿದ ವಿಚಾರವೂ ಗೊತ್ತಾಗಿದೆ. 32ನೇ ವಾರ್ಡ್ ನ ಅಂಬಿಕಾ ಬಡಾವಣೆಯಲ್ಲೂ ಬಯಲು ಜಾಗಕ್ಕೆ  ಮತ್ತು ಸಾರ್ವಜನಿಕ ಸೌಲಭ್ಯಕ್ಕೆ ಬಿಟ್ಟಿದ್ದ ಸುಮಾರು 40 ಸಾವಿರ ಅಡಿಗಳಷ್ಟು ಜಾಗಗಳಿಗೂ ಸಹ ಅಕ್ರಮ ಡೋರ್‌ ನಂಬರ್ ನೀಡಿರುವುದನ್ನು ರದ್ದುಪಡಿಸಲು ಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳಬೇಕು. ಶಕ್ತಿ ನಗರದ ಶ್ರೀ ಬನಶಂಕರಿ ದೇವಸ್ಥಾನ ಎಡ ಭಾಗದಲ್ಲಿ ಡಿಸಿಎಂ ಟೌನ್ ಶಿಪ್‌ನ ದಕ್ಷಿಣ ಭಾಗಕ್ಕೆ ಸುಮಾರು 30 ಅಡಿ ರಸ್ತೆ ಇದ್ದು, ಈ ರಸ್ತೆಯನ್ನು ಒತ್ತುವರಿ ಮಾಡಿ, ಮನೆ ಕಟ್ಟಿ, ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಇದೆ ಎಂದು ಅವರು ಹೇಳಿದ್ದಾರೆ.