ರಸ್ತೆ ಸಂಚಾರ ಗಣತಿ ಆರಂಭ
ಕಲಬುರಗಿ:ಫೆ.28:2024ನೇ ಸಾಲಿಗೆ ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಇದೇ ಫೆಬ್ರವರಿ 29 ರ ಬೆಳಗಿನ 6 ಗಂಟೆಯಿಂದ ಮಾರ್ಚ್ 2ರ ಬೆಳಗಿನ 6 ಗಂಟೆಯವರೆಗೆ ಸತತವಾಗಿ ಎರಡು ದಿನ ಕಾಲ ರಸ್ತೆ ಸಂಚಾರ ಗಣತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳು (ಈಶಾನ್ಯ) ಮುಖ್ಯ ಇಂಜಿನಿಯರರಾದ ಜಗನ್ನಾಥ ಹಲಿಂಗೆ ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಗಣತಿಯನ್ನು ನಡೆಸಲಾಗುತ್ತದೆ. ಈಶಾನ್ಯ ವಲಯದ ಕಲಬುರಗಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳ ಮೇಲೆ 329 ಗಣತಿ ಕೇಂದ್ರ ಹಾಗೂ ಜಿಲ್ಲಾ ಮುಖ್ಯ ರಸ್ತೆ ಮೇಲೆ 597 ಗಣತಿ ಕೇಂದ್ರಗಳು ಸೇರಿದಂತೆ ಒಟ್ಟು 926 ಗಣತಿ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ.
ಪ್ರತಿ ರಸ್ತೆಯ ಸಂಚಾರದ ಬೆಳವಣಿಗೆಯ ತೀವ್ರತೆ ಅಳೆಯಲು, ಪ್ರಸ್ತುತ ಇರುವ ರಸ್ತೆಗಳನ್ನು ದುರಸ್ತಿಪಡಿಸಲು, ರಸ್ತೆಯನ್ನು ಇನ್ನು ಉತ್ತಮಪಡಿಸಲು, ರಸ್ತೆಯ ಸಂಚಾರದ ಬೆಳವಣಿಗೆಯ ತೀವ್ರತೆಯನ್ನು ಗಮನಿಸಿ ರಸ್ತೆಯ ಅಗಲೀಕರಣಗೊಳಿಸಲು, ರಸ್ತೆಗಳನ್ನು ಮೇಲ್ದರ್ಜೇಗೇರಿಸಲು ಹಾಗೂ ವಾಹನ ಅಪಘಾತ ತಡೆಯಲು ಕ್ರಮ ತೆಗೆದುಕೊಳ್ಳಲು ಈ ಗಣತಿಯು ಅನುಕೂಲವಾಗಲಿದೆ.
ವಾಹನ ಚಾಲಕರು ಹಾಗೂ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಈ ಗಣತಿ ಕಾರ್ಯಕ್ಕೆ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.