ಮಾದಿಗ ಸಮಾಜದ ಪೀಠಾಧ್ಯಕ್ಷರ ವಿರುದ್ದ ಸಮಾಜಬಾಂಧವರ ಅಸಮಾಧಾನ

ಸಂಜೆವಾಣಿ ವಾರ್ತೆ
ದಾವಣಗೆರೆ. ಫೆ.೨೮; ಬುದ್ದ,ಬಸವಣ್ಣ ಹಾಗೂ ಅಂಬೇಡ್ಕರ್ ಆದರ್ಶ ಪಾಲಿಸದೇ ಮನು‌ ಸಂಸ್ಕೃತಿ ಪಾಲನೆ ಮಾಡುತ್ತಿರುವ ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಪೀಠಾಧ್ಯಕ್ಷರು ಪೀಠ ತ್ಯಜಿಸಬೇಕೆಂದು ಮಾದಿಗರ ಸಾಂಸ್ಕೃತಿಕ ಸಂಘ ಒತ್ತಾಯಿಸಿದೆ ಹಾಗೂ‌ ಪೀಠಾಧ್ಯಕ್ಷರ ವಿರುದ್ದ ಮಾರ್ಚ್ ೧೦ ರಂದು ಚಿತ್ರದುರ್ಗದಲ್ಲಿ ಸಮಾಜ‌ಬಾಂಧವರಿಂದ ಮುಕ್ತ ಸಂವಾದ ಹಮ್ಮಿಕೊಂಡಿದ್ದೇವೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ಪ್ರೊ.ಸಿ.ಕೆ ಮಹೇಶ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು‌ ಚಿತ್ರದುರ್ಗದ ಮಾದಾರ ಚೆನ್ನಯ್ಯ ಪೀಠದ ಪೀಠಾಧ್ಯಕ್ಷರ ನಡವಳಿಕೆಗಳು ಬುದ್ದ ಬಸವ ಅಂಬೇಡ್ಕರ್ ವಿಚಾರಗಳಿಗೆ ವಿರುದ್ದವಾಗಿವೆ.ಮಠ ಸ್ಥಾಪನೆ ಮಾಡಿದಾಗ ಹಾಗೂ ಪೀಠಕ್ಕೆ ಮುಖ್ಯಸ್ಥರಾದ ವೇಳೆ ಸಮಾಜದ ಅಭಿವೃದ್ಧಿಗೆ ಬದ್ದರಾಗಿ‌ ಕೆಲಸ ಮಾಡುವುದಾಗಿ ಶ್ರೀಗಳು ಮಠದ ನೇತೃತ್ವ ವಹಿಸಿಕೊಂಡಿದ್ದರು. ಬುದ್ದ,ವಚನಕಾರರ ಆಶಯ ಅನುಷ್ಠಾನಗೊಳಿಸುವುದು ಸೇರಿದಂತೆ ಸಮಾಜವನ್ನು ಮುಖ್ಯವಾಹಿನಿಗೆ ತರುವುದಾಗಿತ್ತು ಆದರೆ ಪೀಠಾಧ್ಯಕ್ಷರು‌ ಬ್ರಾಹ್ಮಣ ಪರಂಪರೆಗೆ ಒಳಗಾಗುತ್ತಿದ್ದಾರೆ ಹಾಗೂ ಬುದ್ದ, ಬಸವಣ್ಣ, ಅಂಬೇಡ್ಕರ್ ತತ್ವಾದರ್ಶಗಳಿಗೆ ವಿರುದ್ದವಾಗಿ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು. ಪೀಠಾಧ್ಯಕ್ಷರು ಆರ್ ಎಸ್ ಎಸ್ ಹಾಗೂ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಪ್ರೊ.ಬಿ.ಕೃಷ್ಣಪ್ಪ ಅವರ ಮಾರ್ಗ ದರ್ಶನದಲ್ಲಿ ದಲಿತ ಸಂಘಟನೆಗಳು ಅನ್ಯಾಯದ ಪರವಾಗಿ ದನಿ ಎತ್ತುತ್ತಾ ಮಾದಿಗ ಸಮಾಜದ ಅಭಿವೃದ್ಧಿಗೆ ಮುನ್ನುಡಿ ಹಾಕಿದ್ದರು ಆದರೆ ಪೀಠಾಧ್ಯಕ್ಷರು ಸಮಾಜದ ವಿರುದ್ದವಾಗಿ‌  ನಡೆದುಕೊಳ್ಳುತ್ತಿ ದ್ದಾರೆಂದರು.ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಹಾಗೂ ರಾಜಕೀಯಕ್ಕೆ ಬರುವ ಉದ್ದೇಶದಿಂದ ಸಮಾಜದ ಅಭಿವೃದ್ಧಿ ‌ಮರೆತಿದ್ದಾರೆ.ಪೀಠಾಧ್ಯಕ್ಷರು ಪೀಠ ತ್ಯಜಿಸಿ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಮುಂದಾಗಲಿ‌ ಆದರೆ ಸಮಾಜದ ಹೆಸರು ಹೇಳಿಕೊಂಡು ಬಂದರೆ ಸಹಿಸುವುದಿಲ್ಲ ಎಂದರು.ಅನೇಕ‌ಬಾರಿ‌ ಶ್ರೀಗಳಿಗೆ ಮುಖಾಮುಖಿ ಭೇಟಿಯಾಗಿ ಶರಣರ ಆಲೋಚನೆಗಳಿಗೆ ವಿರುದ್ದವಾಗಿ ನಡೆದುಕೊಳ್ಳಬಾರದು ಎಂದು‌ಹೇಳಿದ್ದೆವು ಆದರೆ ಯಾವುದೇ ಪ್ರಯೋಜನವಾಗಿಲ್ಲ ಅದಕ್ಕಾಗಿ ಮಾರ್ಚ್ ೧೦ ರಂದು ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಬೆಳಗ್ಗೆ ೧೧ ಕ್ಕೆ ಮುಕ್ತ ಸಂವಾದ ಹಮ್ಮಿಕೊಳ್ಳಲಾಗಿದೆ .ಈ ಸಂವಾದದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಮಾಜ‌ಬಾಂಧವರು‌ ಆಗಮಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಡಿ.ದುರುಗೇಶ್,ಕೆ.ಕುಮಾರ್,ಎಂ ಹನುಮಂತಪ್ಪ,ಎಂ.ಮಲ್ಲಿಕಾರ್ಜುನ್,ಕೆ.ಎಂ ಅಂಜಿನಪ್ಪ,ಹೆಚ್.ಸಿ ಮಲ್ಲಪ್ಪ, ಕೆ.ರುದ್ರಪ್ಪ ,ಪರಶುರಾಮ್ ಉಪಸ್ಥಿತರಿದ್ದರು.