ಸನ್‍ರೈಸ್ ಆಸ್ಪತ್ರೆ ತಜ್ಞ ವೈದ್ಯರ ಅದ್ಭುತ ಸಾಧನೆ ಹೃದ್ರೋಗ, ಹರ್ನಿಯಾ ಸಮಸ್ಯೆ ಮಧ್ಯೆ ಯಶಸ್ವೀ ಹೆರಿಗೆ!
ಕಲಬುರಗಿ,ಫೆ.28: ಹೃದ್ರೋಗ ಹಾಗೂ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಗರ್ಭಿಣಿಗೆ ಯಶಸ್ವೀ ಹೆರಿಗೆ ಮಾಡಿಸುವ ಮೂಲಕ ಇಲ್ಲಿನ ಸನ್‍ರೈಸ್ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಸನಾ ಫಾತಿಮಾ ಹಾಗೂ ಡಾ.ಸಲ್ಮಾನ್ ಪಟೇಲ್ ನೇತೃತ್ವದ ವೈದ್ಯರ ತಂಡ ಅದ್ಭುತ ವೈದ್ಯಕೀಯ ಸಾಧನೆ ಮೆರೆದಿದೆ.
ಬಸವಕಲ್ಯಾಣ ತಾಲೂಕಿನ ಗುಂಡೂರು ಗ್ರಾಮದ ಸುಜಾತ ಸುಭಾಷ್ (26) ಇಂಥದ್ದೊಂದು ಸವಾಲಿನ ಹೆರಿಗೆ ಮೂಲಕ ಆರೋಗ್ಯಕರ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಸವಾಲಿನ ಮೇಲೆ ಸವಾಲು:
ಈಗ್ಗೆ ಎರಡು ವರ್ಷಗಳ ಹಿಂದೆ (ಫೆಬ್ರವರಿ 2022) ಹೃದ್ರೋಗದ ಕಾರಣಕ್ಕಾಗಿಯೇ ಸುಜಾತ ಅವರ ಭ್ರೂಣದಲ್ಲಿದ್ದ ಮಗು ಸಾವನ್ನಪ್ಪಿತ್ತು. ಈ ಕಾರಣಕ್ಕಾಗಿ ಯಾವುದೇ ಕಾರಣಕ್ಕೂ ಮಗು ಪಡೆಯುವ ಸಾಹಸಕ್ಕೆ ಕೈ ಹಾಕದಂತೆ ತಜ್ಞ ವೈದ್ಯರು ಸಲಹೆ ನೀಡಿದ್ದರು. ಆದರೂ, ತಾಯ್ತನದ ಆಸೆ ಹೊತ್ತಿದ್ದ ಸುಜಾತ ಸುಭಾಷ್ 18 ತಿಂಗಳ ಹಿಂದೆ ಸನ್‍ರೈಸ್ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಪಟ್ಟಾಗ ಆಕೆ ಆರು ವಾರಗಳ ಗರ್ಭಿಣಿ ಎಂಬುದು ಪತ್ತೆಯಾಗಿತ್ತು. ಆದರೆ, ಅದೇ ವೇಳೆ, ಆಕೆಗೆ ಹರ್ನಿಯಾ ಸಮಸ್ಯೆಯ ಜೊತೆಗೆ ಗಂಭೀರ ಹೃದ್ರೋಗ ಸಮಸ್ಯೆ ಇರುವುದು ಸಹ ವೈದ್ಯರ ಗಮನ ಸೆಳೆದಿತ್ತು. ಹಾಗಾಗಿ, ತಾಯಿಯ ಆರೋಗ್ಯದ ದೃಷ್ಟಿಯಿಂದ ಗರ್ಭಪಾತ ಮಾಡಿಸಿಕೊಳ್ಳುವುದೇ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದರೂ ಸುಜಾತ ಗರ್ಭಪಾತಕ್ಕೆ ಒಪ್ಪಿಗೆ ನೀಡದೆ, ಹೇಗಾದರೂ ಸರಿ; ತನಗೆ ಮಗು ಉಳಿಸಿಕೊಡಬೇಕೆಂದು ಬೇಡಿಕೊಂಡಿದ್ದರಿಂದ ಸನ್‍ರೈಸ್ ಆಸ್ಪತ್ರೆಯ ತಜ್ಞ ವೈದ್ಯೆ ಡಾ.ಝರಾ ಫಾತಿಮಾ ಇದನ್ನೊಂದು ಸವಾಲಾಗಿ ಸ್ವೀಕರಿಸಿದ್ದರು ಎಂದು ಸನ್‍ರೈಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸಲ್ಮಾನ್ ಪಟೇಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದಾದ ಬಳಿಕ ಸುಜಾತ ಅವರಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ಗರ್ಭಕೋಶದಲ್ಲಿ ಇರಬೇಕಿದ್ದ ಭ್ರೂಣ (ಶಿಶು) ತಾಯಿಚೀಲ ಹರಿದು ಹೊರಬಂದಿದ್ದು ಸನ್‍ರೈಸ್ ಆಸ್ಪತ್ರೆಯ ವೈದ್ಯರ ಎದುರು ಮತ್ತೊಂದು ಗಂಭೀರ ಸ್ವರೂಪದ ಸವಾಲು ಎದುರಾಗುವಂತೆ ಮಾಡಿತ್ತು. ಹಾಗಾಗಿ, ಹೈದರಾಬಾದಿನ ಫರ್ನಾಂಡಿಸ್ ಆಸ್ಪತ್ರೆಯ ತಜ್ಞ ವೈದ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದಾಗ ಈ ರೀತಿಯ ಬಹುಮುಖಿ ಸಮಸ್ಯೆ ಇರುವ ಹೆರಿಗೆ ಪ್ರಕರಣ ತಮ್ಮ ಗಮನಕ್ಕೂ ಬಂದಿಲ್ಲ ಎಂದಿದ್ದರು. ಹೀಗಾಗಿ, ಡಾ.ಝರಾ ಫಾತಿಮಾ, ಡಾ.ಸಲ್ಮಾನ್ ಪಟೇಲ್ ನೇತೃತ್ವದ ವೈದ್ಯರ ತಂಡ ಗಹನ ಚರ್ಚೆಯ ಮೂಲಕ ಸುಜಾತ ಅವರ ಕುಟುಂಬದ ಸದಸ್ಯರ ಪೂರ್ವಾನುಮತಿಯೊಂದಿಗೆ ಸವಾಲು ಎದುರಿಸಲು ಸಿದ್ಧಗೊಂಡಿತು.
ಮೊದಲ ಹಂತದಲ್ಲಿ ಹರ್ನಿಯಾ ಯಶಸ್ವೀ ಶಸ್ತ್ರಚಿಕಿತ್ಸೆ ಕೈಗೊಂಡು ಸುಜಾತ ಅವರಿಗೆ ನೆಮ್ಮದಿ ಕಲ್ಪಿಸಲಾಗಿತ್ತಾದರೂ, ಆರು ತಿಂಗಳ ಗರ್ಭಾವಸ್ಥೆಯಲ್ಲಿ ಗರ್ಭಕೋಶದಿಂದ ಶಿಶು ಹೊರಬಂದು ಚರ್ಮದ ಅಡಿಯಲ್ಲಿ ನೆಲೆಗೊಂಡಿದ್ದು ಖುದ್ದು ವೈದ್ಯರಲ್ಲಿ ಆತಂಕ ಮೂಡಿಸಿತ್ತು. ಈ ಹಂತದಲ್ಲಿ ಹೆಚ್ಚು ಕಾಲಹರಣ ಮಾಡದೆ ಪುನಃ ಶಿಶುವನ್ನು ಗರ್ಭಕೋಶದಲ್ಲಿ ಅಳವಡಿಸಿ, ಹೆರಿಗೆಗೂ ಮುನ್ನ ಮತ್ತೊಮ್ಮೆ ಹೊರಬರದಂತೆ ತಡಿಕೆ (ಮೆಷ್) ಅಳವಡಿಸಿ, ಕೊನೆಯ 9 ತಿಂಗಳವರೆಗೆ ತೀವ್ರ ನಿಗಾ ವಹಿಸಲಾಯಿತು. ಹೆರಿಗೆ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆಗೆ ಅವಕಾಶ ನೀಡದಂತೆ ಅಗತ್ಯ ಮುಂಜಾಗ್ರತೆ ವಹಿಸಲು ಮೊದಲೇ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಾಗಾಗಿ, ಕಳೆದ 15 ದಿನಗಳ ಹಿಂದೆ ಸುಜಾತ ಗಂಡು ಮಗುವಿಗೆ ಜನ್ಮ ನೀಡಿದ್ದು, ಆಕೆಯ ಕುಟುಂಬ ಹಾಗೂ ಸನ್‍ರೈಸ್ ಆಸ್ಪತ್ರೆಯ ವೈದ್ಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ಡಾ.ಸಲ್ಮಾನ್ ಪಟೇಲ್ ಹೇಳಿದರು.
ಡಾ.ಝರಾ ಫಾತಿಮಾ ಮಾತನಾಡಿದರು. ಗ್ಯಾಸ್ಟ್ರೋ ಸರ್ಜನ್ ಡಾ.ಆರಿಫ್ ರಝಾ, ಜನರಲ್ ಸರ್ಜನ್ ಡಾ.ಅಹ್ಮದ್ ಫರಾಜ್, ಅರಿವಳಿಕೆ ತಜ್ಞರಾದ ಡಾ.ಹಸೀಬ್ ಮತ್ತು ಡಾ.ಅಜೀಮುದ್ದೀನ್ ಇದ್ದರು.
ಹೈ ರಿಸ್ಕ್ ಡೆಲಿವರಿ ತಜ್ಞೆ ಡಾ.ಝರಾ ಫಾತಿಮಾ
ಹೈ ರಿಸ್ಕ್ ಡೆಲಿವರಿ ಕ್ಷೇತ್ರದಲ್ಲಿ ವಿಶೇಷ ತರಬೇತಿ ಪಡೆದಿರುವ ಸನ್‍ರೈಸ್ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಝರಾ ಫಾತಿಮಾ ಈವರೆಗೆ ಗಂಭೀರ ಸ್ವರೂಪದ ಸುಮಾರು 500 ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸನ್‍ರೈಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸಲ್ಮಾನ್ ಪಟೇಲ್ ಹೇಳಿದರು.
ತೀರಾ ಇತ್ತೀಚೆಗೆ 5000ಕ್ಕಿಂತಲೂ ಕಡಿಮೆ ಪ್ಲೇಟ್‍ಲೆಟ್ ಹೊಂದಿದ್ದ ಮಹಿಳೆಯೊಬ್ಬರಿಗೆ ಸುರಕ್ಷಿತ ಹೆರಿಗೆ ಮಾಡಿಸಿದ ಪ್ರಕರಣದಿಂದ ಹಿಡಿದು, ಹಲವು ಗಂಭೀರ ಸ್ವರೂಪದ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಡಾ.ಝರಾ ಫಾತಿಮಾ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಈ ಪಟ್ಟಿಗೆ ಸುಜಾತ ಸುಭಾಷ್ ಪ್ರಕರಣವೂ ಈಗ ಸೇರ್ಪಡೆಯಾಗಿದೆ ಎಂದರು.
ಇದೇವೇಳೆ, ಸುಜಾತ ಅವರ ಸುರಕ್ಷಿತ ಹೆರಿಗೆ ಪ್ರಕ್ರಿಯೆಗೆ ಸಂಪೂರ್ಣವಾಗಿ ಸಹಕರಿಸಿದ ಗ್ಯಾಸ್ಟ್ರೋ ಸರ್ಜನ್ ಡಾ.ಆರಿಫ್ ರಝಾ, ಜನರಲ್ ಸರ್ಜನ್ ಡಾ.ಅಹ್ಮದ್ ಫರಾಜ್, ಅರಿವಳಿಕೆ ತಜ್ಞರಾದ ಡಾ.ಹಸೀಬ್ ಮತ್ತು ಡಾ.ಅಜೀಮುದ್ದೀನ್ ಅವರನ್ನು ಡಾ.ಸಲ್ಮಾನ್ ಪಟೇಲ್ ಅಭಿನಂದಿಸಿದರು.
ಹೃದ್ರೋಗದ ಆತಂಕ, ಹರ್ನಿಯಾ ಸಮಸ್ಯೆಯ ಮಧ್ಯೆ ಗರ್ಭಕೋಶಕ್ಕೆ ಮೆಷ್ ಅಳವಡಿಸಿ ಯಶಸ್ವೀ ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತ ಹೆರಿಗೆ ಕೈಗೊಂಡಿರುವುದು ಸನ್‍ರೈಸ್ ಆಸ್ಪತ್ರೆಯ ತಜ್ಞ ವೈದ್ಯರ ಸಾಧನೆ ಮಾತ್ರವಲ್ಲ; ಇಂತಹ ಪ್ರಕರಣ ಇಡೀ ರಾಜ್ಯದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಇದು ನಿಜಕ್ಕೂ ಅತ್ಯಪರೂಪದ ಪ್ರಕರಣ.
-ಡಾ.ಸಲ್ಮಾನ್ ಪಟೇಲ್
ವ್ಯವಸ್ಥಾಪಕ ನಿರ್ದೇಶಕರು
ಸನ್‍ರೈಸ್ ಆಸ್ಪತ್ರೆ, ಕಲಬುರಗಿ