ಮರೆಯಾಯಿತು ಹಂತಿ ಸೊಬಗು
ಕಲಬುರಗಿ: ಈ ಮೊದಲು ಹೊಲದಲ್ಲಿ ರಾಶಿ ಮಾಡಲು ಯಂತ್ರಗಳಿರಲಿಲ್ಲ. ಒಂದೆರಡು ಚೀಲದಿಂದ ನೂರಾರು ಚೀಲ ಜೋಳ, ಸಜ್ಜಿ, ಸೂರ್ಯಕಾಂತಿ ರಾಶಿ ಮಾಡಬೇಕೆಂದರೆ ಹಂತಿ ಮಾಡಿಯೇ ರಾಶಿ ಮಾಡಬೇಕಿತ್ತು.ಪ್ರತಿಯೊಂದಕ್ಕೂ ಪಂಚಾಂಗ ನೋಡಿ ಮುಹೂರ್ತದೊಂದಿಗೆ ಎಲ್ಲ ಕಾರ್ಯ ಮಾಡುತ್ತಿದ್ದರು. ಜೋಳ ಕೊಯ್ದು ಗೂಡು ನಿಲ್ಲಿಸಿದ ಮೇಲೆ ಜೋಳದ ರಾಶಿಗೆ ಖಣ ತಯಾರಿ ಮಾಡುತ್ತಿದ್ದರು. ನೆಲ ಗಟ್ಟಿ ಇದ್ದರೆ ಮೇಲಿಂದ ಮಣ್ಣು ತೆಗೆದು ಖಣ ಮಾಡುತ್ತಿದ್ದರು. ಮೆತ್ತಗೆ ಇದ್ದರೆ ಅದನ್ನ ಆಳವಾಗಿ ಕಡಿದು ಎತ್ತುಗಳನ್ನು ಕಟ್ಟಿ ತುಳಿಸಿ, ನೆಲ ಗಟ್ಟಿ ಮಾಡುತ್ತಿದ್ದರು. ನಂತರ ನೀರಿನಿಂದ ತೋಯಿಸಿ ಜೋಳದ ಹೊಟ್ಟು ಹಾಕಿ ತುಳಿಯುತ್ತಿದ್ದರು. ಹಂತಿಗೆ ಮೂರ್ನಾಲ್ಕು ದಿನಗಳ ಮುಂಚೆಯೇ ನೆರೆ ಹೊಲ, ನೆರೆ ಮನೆಯವರ ಎತ್ತು ಹಂತಿಗೆ ಬೇಕೆಂದು ತಿಳಿಸುತ್ತಿದ್ದರು. ಸಂಜೆ ಹೊತ್ತಲ್ಲಿ ಖಣಕ್ಕೆ ಪೂಜೆ ,ನೈವೇದ್ಯ ಅರ್ಪಿಸುತ್ತಿದ್ದರು. ಅವತ್ತು ಬಂಧು ಬಾಂಧವರು ಸ್ನೇಹಿತರಿಗೆ ಆಹ್ವಾನಿಸುತ್ತಿದ್ದರು. ಅವತ್ತು ರಾತ್ರಿ ಸಜ್ಜಕ, ಅನ್ನ ಸಾರು, ಹೋಳಿಗೆ, ರೊಟ್ಟಿ ವಿವಿಧ ತರಹದ ಅಡುಗೆ ಮಾಡಿಸಿ ಬಂದವರೆಲ್ಲರಿಗೂ ಊಟದ ವ್ಯವಸ್ಥೆ ಮಾಡಿರುತ್ತಿದ್ದರು ನಂತರ ಎಲ್ಲ ಎತ್ತುಗಳನ್ನು ಹಂತಿಗೆ ಕಟ್ಟುತ್ತಿದ್ದರು. ನಾಲ್ಕಾರು ಅನುಭವಿ ರೈತರು ಹಂತಿ ಹೊಡೆಯುವದರ ಜೊತೆಗೆ ಎತ್ತುಗಳ ಸೆಗಣಿ ಬಿದ್ದರೆ ತೆಗೆದು ಹಾಕುತ್ತ, ರಾತ್ರಿ ಇಡೀ ಹಂತಿ ಹಾಡು ಹೇಳುತ್ತ, ಹಂತಿ ಹೊಡೀತಿದ್ದರು. ಮಧ್ಯರಾತ್ರಿ ಕಾಳು ಬೇರೆಯಾದ ತೆನೆಗಳು ತೆಗೆದು ಒಂದೇ ಕಡೆ ಹಾಕುತ್ತಿದ್ದರು. ಬೆಳಕಾಗುತ್ತಿದ್ದಂತೆ ಹಂತಿಕಟ್ಟಿರೋ ಎತ್ತುಗಳು ಬಿಚ್ಚುತ್ತಿದ್ದರು. ಅಲ್ಲಿಗೆ ಅರ್ಧ ಕೆಲಸ ಮುಗಿದಂತೆ. ಮತ್ತೆ ಮನೆಯಿಂದ ನೈವೇದ್ಯ ತಂದು ಪೂಜೆ ಮಾಡುತಿದ್ದರು. ಅದು ಮದಮುರಿಯೋದು ಅನ್ನುತ್ತಿದ್ದರು.
ಕಣದಿಂದ ರಾಶಿಮನೆಗೆ ಸಾಗಿಸುವರೆಗೂ ಅದರದೇ ಆದ ಕೆಲ ನಿಯಮಗಳಿದ್ದವು.ಗಾಳಿ ಬಿಟ್ಟಾಗ ದಿನವಿಡೀ ತೂರುತ್ತ ಜೋಳ ಒಂದೆಡೆ ಶೇಖರಿಸಿಡುತ್ತಿದ್ದರು. ಆಗೆಲ್ಲ ರೈತರು ಆಯ ಪದ್ಧತಿಗೆ ಒಳಪಟ್ಟಿರುವುದರಿಂದ ಎಲ್ಲ ಆಯಗಾರರಿಗೂ ಧಾನ್ಯಗಳ ದಾನಧರ್ಮ ಮಾಡುತ್ತಿದ್ದರು. ನಂತರ ಬಂಡಿಯಲ್ಲಿಎತ್ತುಗಳಿಗೆ ಅಲಂಕಾಲ ಮಾಡಿ ಮೆರವಣಿಗೆಯೊಂದಿಗೆ ಜೋಳದ ರಾಶಿ ಮನೆಗೆ ತಂದು ಹಗೆ ಸೇರಿಸುತ್ತಿದ್ದರು.ರಾಶಿ ಮಾಡಬೇಕಾದರೆ ಅದರ ಸಲಕರಣೆಗಳಾದ ಮೇಟಿ, ರಾಗೋಲ, ಹಂತಿ ಕಣ್ಣಿ, ಮೆಟ್ಟನಾಲಿಗೆ ಎಲ್ಲರಲ್ಲೂ ಇರುತ್ತಿರಲಿಲ್ಲ. ಒಬ್ಬರಿಗೊಬ್ಬರು ಕೊಡು ತೆಗೆದುಕೊಳ್ಳುವದು ಮಾಡುತ್ತಿದ್ದರು.ಹಂತಿಯ ಕುರಿತು ಇಷ್ಟು ದೀರ್ಘ ಪರಂಪರೆ ಇದೆ. ಈಗ ಅದೆಲ್ಲ ಮರೆಯಾಗಿ ಹೋಗಿ ಬರೀ ಯಾಂತ್ರಿಕ ಜೀವನ ನಮ್ಮನ್ನು ಆಳುತ್ತಿದೆ.