ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪಾಲಕರು, ಶಿಕ್ಷಕರ ಪಾತ್ರ ದೊಡ್ಡದು:ಕೆಲೂರ
ವಿಜಯಪುರ,ಫೆ.28:ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪಾಲಕರು, ಶಿಕ್ಷಕರ ಪಾತ್ರ ಅತೀ ಮಹತ್ವದ್ದಾಗಿದ್ದು, ಇದನ್ನರಿತು ಪ್ರಾರಂಭದಲ್ಲಿ ಪ್ರತಿ ಮಗುವಿನ ಕೌಶಲ್ಯ ವೃದ್ಧಿಸಲು ಶ್ರಮಿಸಬೇಕಾದ ಅವಶ್ಯಕತೆ ಇದೆ ಎಂದು ಶ್ರೀ ವೇದ ಅಕಾಡೆಮಿಯ ಅಧ್ಯಕ್ಷ ಡಾ. ಶಿವಾನಂದ ಎನ್. ಕೆಲೂರ ತಿಳಿಸಿದರು.
ನಗರದ ಹೊರವಲಯದಲ್ಲಿರುವ ವೇದ ಅಕಾಡೆಮಿಯಲ್ಲಿ ಜರುಗಿದ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ. ಅನೌಪಚಾರಿಕ ಶಿಕ್ಷಣದಿಂದ ಔಪಚಾರಿಕ ಶಿಕ್ಷಣಕ್ಕೆ ಅಡಿ ಇಡುತ್ತಿರುವ ಮಕ್ಕಳ ಪಾಲಕರು ಮುಂದಿನ ಹತ್ತು ವರ್ಷ ಶಿಸ್ತು, ದಂಡನೆಯೊಂದಿಗೆ ಮಕ್ಕಳನ್ನು ಯೋಗ್ಯ ರೀತಿಯಲ್ಲಿ ಬೆಳೆಸುವ ಅವಶ್ಯಕತೆ ಇದೆ. ಇಂದಿನ ಪೀಳಿಗೆಯ ಮಕ್ಕಳಲ್ಲಿ 21ನೇ ಶತಮಾನಕ್ಕೆ ಅವಶ್ಯವಿರುವ ಕೌಶಲ್ಯಗಳನ್ನು ಬೆಳೆಸುವ ಜವಾಬ್ದಾರಿ ನಮ್ಮ, ನಿಮ್ಮೆಲ್ಲರ ಮೇಲಿದ್ದು, ಪ್ರತಿಯೊಬ್ಬ ಪಾಲಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಿದಲ್ಲಿ ಮಕ್ಕಳ ಉತ್ತಮ ಭವಿಷ್ಯ ರೂಪಿಸಬಹುದು. ಶ್ರೀ ವೇದ ಅಕಾಡೆಮಿಯಲ್ಲಿ ಕಲಿತ ಮಗು ಕೌಶಲ್ಯ ನೈಪುಣ್ಯತೆಯೊಂದಿಗೆ ಸ್ಪರ್ಧಾತ್ಮಕ ಜಗತ್ತಿಗೆ ಅಡಿಯಿಟ್ಟಾಗ ಯಶಸ್ಸಿನ ಉತ್ತುಂಗಕ್ಕೆ ಏರಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಪೆÇೀಲಿಸ್ ಅಧಿಕಾರಿ ಬಿ.ಆರ್ ಚೌಕಿಮಠ ಮಾತನಾಡಿ, ಇಂದಿನ ಮಕ್ಕಳಿಗೆ ದೊರೆಯುವ ಸೌಲಭ್ಯ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಶಾಲೆ ಮತ್ತು ಪಾಲಕರು ಸಮಾನ ಪಾಲುದಾರರಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ಲೋಹಗಾಂವ ಸಿ.ಆರ್.ಪಿ ಜ್ಯೋತಿ ಕೊಣ್ಣೂರ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ತೋರುತ್ತಿರುವ ಶ್ರೀ ವೇದ ಅಕಾಡೆಮಿ ಶಾಲೆ ಮುಂದೊಂದು ದಿನ ಹೆಮ್ಮರವಾಗಿ ಬೆಳೆದು ಕರ್ನಾಟಕದಲ್ಲಿಯೇ ಅತ್ಯುತ್ತಮ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ಒಂದಾಗಲಿದೆ ಎಂದು ತಿಳಿಸಿದರು.
ಪಾಲಕ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಗೋಠೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ವಿಜಯಲಕ್ಷ್ಮಿ ಪಾಟೀಲ ಮಾತನಾಡಿ, ಮಕ್ಕಳು ಪಡೆಯುವ ಅಂಕಗಳಿಗಿಂತ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಸಮಗ್ರವಾಗಿ ಪೆÇೀಷಿಸಿ, ಬೆಳೆಸುವ ಅಗತ್ಯತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯು.ಕೆ.ಜಿ ಮಕ್ಕಳಿಗೆ ಪದವಿ ಪ್ರದಾನ ಮಾಡಲಾಯಿತು. ನಂತರ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು. ಕಾರ್ಯಕ್ರಮದಲ್ಲಿ ಬಾಲ ಕಲಾವಿದೆ ಸಾಕ್ಷಿ ಹಿರೇಮಠ, ಪ್ರಾಚಾರ್ಯ ಸುನೀಲ. ಬಿ.ಎಂ, ಮುಖ್ಯ ಗುರುಮಾತೆ ರಶ್ಮಿ ಕವಟಗಿಮಠ ಉಪಸ್ಥಿತರಿದ್ದರು.
ರೋಹಿಣಿ ಮಾನೆ ಸ್ವಾಗತಿಸಿದರು. ಸನಾ ಇನಾಂದಾರ ನಿರೂಪಿಸಿದರು. ಅಂಬುಜಾ ದೇಶಪಾಂಡೆ ವಂದಿಸಿದರು.