ಮನುಷ್ಯ ಸತ್ತರೆ ಮಣ್ಣಿಗೆ ಮಣ್ಣು ಸತ್ತರೆ ಎಲ್ಲಿಗೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.28: ನಗರದ ಶ್ರೀ ಗುರು ತಿಪ್ಪೇರುದ್ರ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ನಿನ್ನೆ  ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ  ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಡಿ.ಸತೀಶ್ ಕಾರ್ಯಕ್ರಮ ಉದ್ಘಾಟಿಸಿ, ಆಹಾರದ ಜೊತೆಗೆ ನಾವಿಂದು ವಿಷವನ್ನು ಸೇವಿಸುತ್ತಿದ್ದೇವೆ ,ನಾವು ಸೇವಿಸುವ ಆಹಾರಧಾನ್ಯ ,ತರಕಾರಿಗಳಿಗೆ ಕ್ರಿಮಿ ನಾಶಕ ಸಿಂಪಡಿಸಿ ಬೆಳೆದು ಭೂಮಿಯನ್ನು ಸತ್ವ ಹೀನ ಮಾಡುತ್ತಿದ್ದಾರೆ.  ಇದರಿಂದ ಹಲವಾರು ಕಾಯಿಲೆಗಳಿಗೆ ನಾವಿಂದು ತುತ್ತಾಗುತ್ತಿದ್ದೇವೆಂದರು‌
ದತ್ತಿ ಉಪನ್ಯಾಸವನ್ನು ನೀಡಿದ ಬಳ್ಳಾರಿ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಎಂ. ಕೆಂಗೇಗೌಡ, ರೈತರು ಬೆಳೆಯುವ ಪ್ರತಿ ಬೆಳೆಯಲ್ಲಿಯೂ ಕ್ರಿಮಿನಾಶ ಔಷಧಿ ಬಳಕೆ ಸರ್ವೇ ಸಾಮಾನ್ಯವಾಗಿದೆ. ಇದರಿಂದ ಹಲವಾರು ಸಮಸ್ಯೆಗಳನ್ನು ನಾವಿಂದು ಅನುಭವಿಸುತ್ತಿದ್ದೇವೆ, ದೇಶದಲ್ಲಿಂದು 165ಕ್ಕೂ ಹೆಚ್ಚು ಕ್ರಿಮಿ ನಾಶಕ ಔಷಧಿ ತಯಾರಿಕಾ ಘಟಕಗಳು ತಲೆಯೆತ್ತಿ ನಿಂತಿವೆ.  ನಿರಂತರವಾಗಿ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ  ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ, ಬೆಳೆದ ಬೆಳೆಗಳಲ್ಲಿ ಯಾವುದೇ ಪೌಷ್ಟಿಕಾಂಶದ ಅಂಶಗಳು ನಮಗೆ ಸಿಗುವುದಿಲ್ಲ,
ಅತಿಯಾದ ರಸಗೊಬ್ಬರಗಳನ್ನು ಬಳಸುವುದನ್ನು ಬಿಟ್ಟು ಜೀವಾಮೃತ ಪಂಚಗವಿ ಮುಂತಾದ ಸಾವಯವ ಗೊಬ್ಬರ ಬಳಸಿ ಬೆಳೆಯನ್ನು ಬೆಳೆದಾಗ ಮಾತ್ರ ಆರೋಗ್ಯವನ್ನು ಕಾಪಾಡಲು ಸಾಧ್ಯ.  ನಾವು ನೀವೆಲ್ಲರೂ ಸಾವಯವ ಕೃಷಿಯ ಕಡೆಗೆ ಹೆಚ್ಚು ಹೊತ್ತು ಕೊಡುವುದರ ಜೊತೆಗೆ. ಸಿರಿ ಧಾನ್ಯಗಳನ್ನು ಹೆಚ್ಚು ಬಳಸಿ ಎಂದರು.
ಎಸ್.ಜಿ.ಟಿ. ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ನಾಗರಾಜ್ ಅಧ್ಯಕ್ಷತೆವಹಿಸಿದ್ದರು.
ಪರಿಷತ್ತಿನ  ಗೌರವ ಕಾರ್ಯದರ್ಶಿ ಕಾರ್ತಿಕ್ ಮರಿಸ್ವಾಮಿ ಮಠ  ಸ್ವಾಗತಿಸಿದರು,  ಅಧ್ಯಕ್ಷ ನಾಗರೆಡ್ಡಿ ಕೆ. ವಿ. ಪ್ರಾಸ್ತಾವಿಕ ನುಡಿಗಳನ್ನು ನುಡಿದರು,ಕುಮಾರಿ ನಾಗಾರ್ಷಿತಾ  ಕಾರ್ಯಕ್ರಮ ನಿರೂಪಿಸಿದರು.
ಪರಿಷತ್ತಿನ  ಜಿಲ್ಲಾಧ್ಯಕ್ಷ ಡಾ. ನಿಷ್ಟಿರುದ್ರಪ್ಪ ಮತ್ತು ಎಸ್ . ಜಿ.ಟಿ.ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ಎನ್. ರುದ್ರಪ್ಪ, ಪ್ರಾಚಾರ್ಯರಾದ ಪ್ರಕಾಶ್ ಸಾರಂಗಮಠ ,ಜಿ .ತಿಪ್ಪೇಶ್ ರಾಮಚಂದ್ರ .ವಿ ಎಂ ಬಸವರಾಜ್ ಉಪಸ್ಥಿತರಿದ್ದರು.