ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರೆ
ಬ್ಯಾಡಗಿ,ಫೆ28: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾವೇರಿ ಚಲೋ ರೈತ ಪ್ರತಿಭಟನೆಗೆ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವಂತೆ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಕರೆ ನೀಡಿದರು.
ಅವರು ಸ್ಥಳೀಯ ತಹಶೀಲ್ದಾರರ ಕಾರ್ಯಾಲಯದ ಎದುರು ನಡೆದ ತಾಲೂಕಾ ರೈತ ಸಂಘದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ದೆಹಲಿಯಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹತ್ತು ಹಲವಾರು ರೈತ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರತಿಭಟನೆ ಹತ್ತಿಕ್ಕಲು ಸರ್ಕಾರಗಳು ಹಲವಾರು ಪ್ರಯೋಗಗಳನ್ನು ಮಾಡುತ್ತಿರುವುದು ತಮ್ಮ ಗಮನಕ್ಕೂ ಬಂದಿದೆ. ಅದನ್ನೂ ಮೀರಿಸುವಂತಾ ಹೆಚ್ಚಿನ ಪ್ರತಿಭಟನೆ ಹಾವೇರಿಯಲ್ಲಿ ನಡಯಬೇಕಿದೆ. ಮಾ.5 ರಂದು ಹಾವೇರಿಯಲ್ಲಿ ರೈತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕಿನ ರೈತರನ್ನು ಸಂಪರ್ಕಿಸುವ ಕಾರ್ಯ ಮುಂದುವರಿದಿದೆ. ತಾಲೂಕಿನಲ್ಲಿರುವ ಎಲ್ಲಾ ರೈತರು ತಮ್ಮ ತಮ್ಮ ಟ್ರಾಕ್ಟರ್ ಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಸೇರಬೇಕು. ಹಾವೇರಿಯ ಎಲ್ಲಾ ರಸ್ತೆಗಳಲ್ಲೂ ರೈತರ ಚಳುವಳಿಗಳ ಟ್ರಾಕ್ಟರ್ ಗಳೇ ಕಾಣುವಂತಾಗಬೇಕು. ರೈತರ ಆಂದೋಲನವನ್ನು ತೀವ್ರಗೊಳಿಸಿದಲ್ಲಿ ಮಾತ್ರ ಸರ್ಕಾರಗಳು ನಮ್ಮ ಮನವಿಗೆ ಸ್ಪಂದಿಸಿ ನಮ್ಮ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿದೆ ಎಂದರು.
ತಾಲೂಕಾ ಹಸಿರು ಸೇನೆ ಅಧ್ಯಕ್ಷ ಗಂಗಣ್ಣ ಯಲಿ ಮಾತನಾಡಿ ಕಳೆದ ವರ್ಷ ಹೆಚ್ಚಿನ ಮಳೆಯಾಗಿ ರೈತರಿಗೆ ಇಳುವರಿ ಬಾರದೇ ತೊಂದರೆಗೆ ಒಳಗಾಗಿದ್ದು, ಪ್ರಸಕ್ತ ವರ್ಷದಲ್ಲಿ ಮಳೆ ಬಾರದೇ ತಾಲೂಕಿನಲ್ಲಿ ತೀವ್ರ ಬರಗಾಲ ಆವರಿಸಿದ್ದು, ಸರ್ಕಾರ ರೈತರು ಮಾಡಿರುವ ಸಾಲವನ್ನು ಮಾರ್ಚ್ ತಿಂಗಳೊಳಗೆ ತುಂಬಿದಲ್ಲಿ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಹೇಳಲಾಗಿದೆ. ಆದರೇ ಎರಡು ವರ್ಷಗಳಿಂದ ರೈತರಿಗೆ ಯಾವುದೇ ಇಳುವರಿ ಬಾರದೇ ರೈತರ ಹತ್ತಿರ ಬಿಡಿಗಾಸು ಇಲ್ಲದಂತಾಗಿದ್ದು, ಸರ್ಕಾರ ರೈತರ ಬಡ್ಡಿ ಹಾಗೂ ಅಸಲು ಸೇರಿದಂತೆ ಸಾಲ ಮನ್ನಾ ಮಾಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ರೈತ ಸಂಘದ ಅಧ್ಯಕ್ಷ ಆರ್.ಬಿ.ಕಾಡನಗೌಡ್ರ ಮಾತನಾಡಿ ಬರಗಾಲದಿಂದ ಪ್ರತಿ ಎಕರೆಗೆ ರೈತರಿಗೆ 25 ಸಾವಿರ ಪರಿಹಾರ ನೀಡಬೇಕು. ವಿಮಾ ಹಣ ಬಿಡುಗಡೆ ಮಾಡಬೇಕು. ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಮಂಜೂರು ಮಾಡಬೇಕು. ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿಗೆ ತರಬೇಕು. ರೈತರ ಕೃಷಿ ಸಾಲವನ್ನು ಸಿಬಿಲ್ ನಿಂದ ಹೊರಗಿಡುವಂತೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ರೈತ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಿರಸ್ತೇದಾರ್ ಮೂಲಕ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಶಹರ ಘಟಕದ ಅಧ್ಯಕ್ಷ ಚಿಕ್ಕಪ್ಪ ಛತ್ರದ, ಕಾರ್ಯಾಧ್ಯಕ್ಷ ಕಿರಣ ಗಡಿಗೋಳ, ಕೆ.ವಿ. ದೊಡ್ಡಗೌಡ್ರ, ಜಾನ್ ಪುನಿತ್, ಮೌನೇಶ್ ಕಮ್ಮಾರ, ನಿಂಗಣ್ಣ ಹೆಗ್ಗಣ್ಣನವರ, ಪ್ರಕಾಶ ಸಿದ್ದಮ್ಮನವರ ಸೇರಿದಂತೆ ಇತರರಿದ್ದರು.