ಅರ್ಹ ಕಾರ್ಮಿಕರು ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ
ಗದಗ,ಫೆ28: ಅರ್ಹ ಕಾರ್ಮಿಕರು ಇಲಾಖೆಯ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ನುಡಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ಏರ್ಪಡಿಸಲಾದ ಕಾರ್ಮಿಕ ಕಲ್ಯಾಣ ಜಾಗೃತಿ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಾಗೃತಿ ರಥವು ಜಿಲ್ಲೆಯಾದ್ಯಂತ ಇಂದಿನಿಂದ ಒಂದು ವಾರದವರಗೆ ಸಂಚರಿಸಲಿದ್ದು ಇದರ ಸದುಪಯೋಗವನ್ನು ಕಾರ್ಮಿಕರು ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾಧವ ಮಾತನಾಡಿ ಇಲಾಖೆಯಿಂದ ಕುಟುಂಬ ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ, ಟೂಲ್ ಕಿಟ್ ಸೌಲಭ್ಯ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯ ಧನ, ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ಸಹಾಯ ಧನ, ಮದುವೆ ಸಹಾಯ ಧನ, ತಾಯಿ ಮಗು ಸಹಾಯ ಹಸ್ತ ಹೀಗೆ ಕಾರ್ಮಿಕ ಇಲಾಖೆಯಿಂದ ಹಲವಾರು ಸೌಲಭ್ಯಗಳನ್ನು ಕಾರ್ಮಿಕರಿಗೆ ಒದಗಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಸಂದೇಶ ಪಾಟೀಲ, ಕಾರ್ಮಿಕ ನಿರೀಕ್ಷಕರಾದ ಉಮೆಶ ಹುಲ್ಲಣ್ಣವರ ಸೇರಿದಂತೆ ಇತರರು ಇದ್ದರು.