ಉಪವಾಸ ಸತ್ಯಾಗ್ರಹ
ಬ್ಯಾಡಗಿ,ಫೆ28 : ಪಟ್ಟಣದಲ್ಲಿ ಮುಖ್ಯರಸ್ತೆ ಅಗಲೀಕರಣ ಸಮಿತಿ ಕಾರ್ಯಕರ್ತರು ಮಂಗಳವಾರದಿಂದ ಹಳೇ ಪುರಸಭೆ ಎದುರಿಗೆ ರಸ್ತೆ ಅಗಲೀಕರಣ ಪ್ರಾರಂಭಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಯವಾದಿ ಸುರೇಶ ಚಲುವಾದಿ ಮಾತನಾಡಿ, ಬ್ಯಾಡಗಿ ಪಟ್ಟಣದಲ್ಲಿ ಹಾದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ- 136ರ ಅತಿಕ್ರಮಣ ತೆರವುಗೊಳಿಸಿ ದ್ವಿಮುಖ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಕಳೆದ 14 ವರ್ಷಗಳಿಂದ ಹಲವಾರು ಬಾರಿ ಒತ್ತಾಯಿಸಿ ಮುಖ್ಯರಸ್ತೆ ಅಗಲೀಕರಣ ಸಮಿತಿಯಿಂದ ಹೋರಾಟ ಮಾಡಲಾಗಿದೆಯಾದರೂ ರಸ್ತೆ ಅಗಲೀಕರಣಕ್ಕೆ ಸರ್ಕಾರ ಸ್ಪಂದಿಸದೇ ಇರುವುದು ನೋವಿನ ಸಂಗತಿಯಾಗಿದೆ. ಇಂದಿನಿಂದ ಪ್ರಾರಂಭವಾಗಿರುವ ಈ ಹೋರಾಟಕ್ಕೆ ಪಟ್ಟಣದ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ನ್ಯಾಯವಾದಿಗಳ ಸಂಘದ ಬೆಂಬಲ:
ಈ ರಸ್ತೆ ಅಗಲೀಕರಣ ಉಪವಾಸ ಸತ್ಯಾಗ್ರಹಕ್ಕೆ ತಾಲೂಕಿನ ನ್ಯಾಯವಾದಿಗಳ ಸಂಘದವರು ಸಾಥ್ ನೀಡುವ ಮೂಲಕ ಬೆಂಬಲ ಸೂಚಿಸಿ, ಸಂಘದ ಅಧ್ಯಕ್ಷ ಶಂಕರ್ ಬಾರ್ಕಿ ಮಾತನಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಬಿ.ಜಿ.ಹಿರೇಮಠ, ಎಂ.ಪಿ.ಹಂಜಗಿ, ಎಂ.ಜೆ.ಪಾಟೀಲ, ಎಂ.ಜಿ.ಹಿರೇಮಠ, ಎನ್. ಬಿ.ಬಳಿಗಾರ, ಎಸ್.ಜೆ.ಜಂತ್ಲಿ, ಐ.ಎಸ್.ಎಲಿ, ನವೀನ ಮುಳಗುಂದ, ಚಂದ್ರು ಆಯೋಜಿ, ಪಾಂಡು ಸುತಾರ, ಎಂ ಎಲ್. ಕಿರಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.