ಎಥೆನಾಲ್ ಮತ್ತು ಡಿಸ್ಟಿಲರಿ ಸ್ಥಾಪನೆ ವಿರೋಧಿಸಿ ಜನ ಜಾಗೃತಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.28: ತಾಲೂಕಿನ ಮಾಕವಳ್ಳಿ ಬಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಎಥೆನಾಲ್ ಮತ್ತು ಡಿಸ್ಟಿಲರಿ ಘಟಕ ಸ್ಥಾಪನೆಯ ಪ್ರಯತ್ನವನ್ನು ವಿರೋಧಿಸಿ ತಾಲೂಕು ರೈತಸಂಘ ಕಾರ್ಖಾನೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನಜಾಗೃತಿ ಕಾರ್ಯಕ್ಕೆ ಚಾಲನೆ ನೀಡಿದೆ.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಕಾರ್ಖಾನೆಯ ಸುತ್ತ ಮುತ್ತಲ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಪರಿಸರ ಜಾಗೃತಿ ಕರಪತ್ರಗಳನ್ನು ಹಂಚಿ ಸಭೆಗಳನ್ನು ನಡೆಸುವ ಮೂಲಕ ಜನ ಜಾಗೃತಿ ಆಂದೋಲನ ನಡೆಸುತ್ತಿದೆ.
ನಾವು ರೈತರು, ನಾವು ಸತ್ತರೆ ನಮ್ಮನ್ನು ಇಲ್ಲಿಯೇ ಹೂಳಬೇಕು. ಕಾರ್ಖಾನೆಯವರು ಬಂಡವಾಳ ಮಾಡಿಕೊಂಡು ಎಲ್ಲಿಯೋ ಬದುಕುತ್ತಿದ್ದಾರೆ. ಕಾರ್ಖಾನೆ ಮದ್ಯಸಾರ ಘಟಕವನ್ನು ಆರಂಭಿಸಿದರೆ ನಮ್ಮ ಮಕ್ಕಳಿಗೆ ನಾವೇ ವಿಷ ಕೊಟ್ಟಂತಾಗುತ್ತದೆ. ಕಾರ್ಖಾನೆ ಹೇಮಾವತಿ ನದಿಯ ದಂಡೆಯಲ್ಲಿದೆ. ಈಗಾಗಲೇ ಕಾರ್ಖಾನೆ ಆರಂಭಿಸಿರುವ ವಿದ್ಯುತ್ ಉತ್ಪಾದನಾ ಘಟಕದ ಹಾರು ಬೂದಿಯ ಸಮಸ್ಯೆಯಿಂದ ಕಾರ್ಖಾನೆಯ ಸುತ್ತಲ ಪರಿಸರ ಹಾನಿಗೊಂಡಿದೆ. ಹಾರು ಬೂದಿಯ ಸಮಸ್ಯೆಯಿಂದ ರೈತರ ಕೃಷಿ ಉತ್ಪಾದನೆ ಕುಂಠಿತಗೊಂಡಿದೆ. ಕೋಜನ್ ಘಟಕ ಆರಂಭಿಸುವ ಸಂದರ್ಭದಲ್ಲಿ ಕಾರ್ಖಾನೆ ಈ ಭಾಗದ ರೈತರಿಗೆ ನೀಡಿದ ವಾಗ್ದಾನದಂತೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದೆ ಹಳೆಯ ತಂತ್ರಜ್ಞಾನದಲ್ಲಿಯೇ ಕಾರ್ಖಾನೆಯನ್ನು ನಡೆಸುತ್ತಿದೆ. ಕೋ-ಜನ್ ಆರಂಭದ ಸಂದರ್ಭದಲ್ಲಿ ರೈತರು ಪೂರೈಸಿದ ಕಬ್ಬಿಗೆ ಹೆಚ್ಚು ಬೆಲೆ ನೀಡುವುದಾಗಿ ಹೇಳಿದ್ದ ತನ್ನ ಮಾತಿನಂತೆ ನಡೆದುಕೊಳ್ಳದೆ ಕೇಂದ್ರ ಸರ್ಕಾರದ ಎಂ.ಎಸ್.ಪಿ ದರವನ್ನು ಮಾತ್ರ ನೀಡುತ್ತಿದೆ. ಕಾರ್ಖಾನೆಯ ಡಿಸ್ಟಿಲರಿ ಘಟಕದ ಆರಂಭವನ್ನು ವಿರೋಧಿಸಿ ರಾಜ್ಯ ರೈತಸಂಘ ಚೆನ್ನೈ ನಗರದ ಹಸಿರು ನ್ಯಾಯಾಲಯಕ್ಕೆ ದೂರು ನೀಡಿದ ಸಂದರ್ಭದಲ್ಲಿ ಕಾರ್ಖಾನೆ ಕಬ್ಬು ಅರೆಯುವಿಕೆಯನ್ನು ಹೊರತು ಪಡಿಸಿ ಮದ್ಯಸಾರ ಘಟಕ ಸ್ಥಾಪಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಲಿಖಿತವಾಗಿ ಹೇಳಿಕೆ ನೀಡಿದೆ. ಆದರೆ ಈಗ ತನ್ನ ಹೇಳಿಕೆಯನ್ನು ಉಲ್ಲಂಘಿಸಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆ ಎಥೆನಾಲ್ ಉತ್ಪಾದನೆ ಮತ್ತು ಮದ್ಯಸಾರ ಘಟಕ ಆರಂಭಕ್ಕೆ ಸಿದ್ದತೆ ನಡೆಸುತ್ತಿದೆ. ಕಾರ್ಖಾನೆಯ ಗುತ್ತಿಗೆದಾರರ ಮೂಲಕ ತಾನೇ ನಿರ್ಮಿಸಿಕೊಂಡಿರುವ ಕಬ್ಬು ಬೆಳೆಗಾರರ ಸಂಘದ ಹೆಸರಿನಲ್ಲಿ ಎಥೆನಾಲ್ ಘಟಕ ಮತ್ತು ಮದ್ಯಸಾರ ಘಟಕ್ಕಕೆ ರೈತರ ವಿರೋಧವಿಲ್ಲ ಎನ್ನುವ ತಪ್ಪು ಸಂದೇಶವನ್ನು ನೀಡಿ ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸವನ್ನು ಕಾರ್ಖಾನೆ ಮಾಡುತ್ತಿದೆ. ಕಾರ್ಖಾನೆಯ ಫೀಲ್ಡ್ ಮೆನ್ ಗಳು ಮತ್ತು ಅಧಿಕಾರಿಗಳು ರೈತರ ಮನೆ ಮನೆಗೆ ತೆರಳಿ ನೈಜ ವಿಚಾರವನ್ನು ಮುಚ್ಚಿಟ್ಟು ರೈತರಿಂದ ಎಥೆನಾಲ್ ಮತ್ತು ಮದ್ಯಸಾರ ಘಟಕದ ಪರವಾಗಿ ಸಹಿ ಸಂಗ್ರಹ ಮಾಡುತ್ತಿದ್ದಾರೆ. ಕಾರ್ಖಾನೆ ಎಥೆನಾಲ್ ಘಟಕ ಮತ್ತು ಮದ್ಯಸಾರ ಘಟಕವನ್ನು ಆರಂಭಿಸಿದರೆ ಕಾರ್ಖಾನೆಯ ಸುತ್ತ ಮುತ್ತಲ 05 ಕಿ.ಮಿ ವ್ಯಾಪ್ತಿಯ ಹಳ್ಳಿಗರ ಬದುಕು ನಾಶವಾಗಲಿದೆ. ಕಾರ್ಖಾನೆಯ ಕೆಳಭಾಗದ ಹೇಮಾವತಿ ನದಿಯ ನೀರನ್ನು ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ನೂರಾರು ಗ್ರಾಮಗಳ ಜನ ಕುಡಿಯಲು ಬಳಸುವುದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಜಾಗೃತಿ ಸಭೆಗಳಲ್ಲಿ ಜನ ಸಮುದಾಯವನ್ನು ಎಚ್ಚರಿಸುತ್ತಿರುವ ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಹೇಮಾವತಿ ನದಿ ಉಳಿಸಿ ಮತ್ತು ಪರಿಸರ ಸಂರಕ್ಷಿಸಿ ಆಂದೋಲನ ಸಮಿತಿ ವತಿಯಿಂದ ದಿನಾಂಕ 1.3.2024 ರಂದು ಶುಕ್ರವಾರ ಬೆಂಗಳೂರು ನಗರದ ರಾಜ್ಯ ಪರಿಸರ ಮಾಲಿನ್ಯ ಇಲಾಖೆಯ ಅಧ್ಯಕ್ಷರು ಮತ್ತು ಸದಸ್ಯರ ಕಚೇರಿಯಲ್ಲಿ ಸಾಮೂಹಿಕ ಚರ್ಚೆ ನಡೆಯಲಿದ್ದು ಈ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸಿ ಮಾಲಿನ್ಯ ನಿಯಂತ್ರಣ ಮಂಡಲಿಯ ಮುಂದೆ ತಮ್ಮ ಸಂಕಷ್ಠಗಳನ್ನು ನಿವೇಧಿಸುವಂತೆ ಮನವಿ ಮಾಡಿದರು.
ಕೋರಮಂಡಲ್ ಸಕ್ಕರೆ ಕಾರ್ಖಾನೆ ಎಥೆನಾಲ್ ಹಾಗೂ ಡಿಸ್ಟಿಲರಿ ಸ್ಥಾಪಿಸುವ ಸಂಬಂಧ ದಿನಾಂಕ 06-03-2024 ರಂದು ಜಿಲ್ಲಾಧಿಕಾರಿಗಳು ಮತ್ತು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ಅಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ಕರೆದಿರುವ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯನ್ನು ರದ್ದುಪಡಿಸಬೇಕು. ಎಥೆನಾಲ್ ಮತ್ತು ಮದ್ಯಸಾರ ಘಟಕದಿಂದ ಹೇಮಾವತಿ ನದಿ ಮತ್ತು ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ಪರಿಶೀಲಿಸಿ ಪರಿಸರ ಸಂರಕ್ಷಣೆಯ ಕೆಲಸವನ್ನು ಜಿಲ್ಲಾಡಳಿತ ಮಾಡುವಂತೆ ಕಾರಿಗನಹಳ್ಳಿ ಪುಟ್ಟೇಗೌಡ ಒತ್ತಾಯಿಸಿದ್ದು ಕಾರ್ಖಾನೆಯ ವ್ಯಾಪ್ತಿಯ ಜನ ಸಂಘಟಿತರಾಗಿ ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಕಾರ್ಖಾನೆಯ ಉದ್ದೇಶಿತ ನೂತನ ಘಟಕಗಳ ಆರಂಭವನ್ನು ವಿರೋಧಿಸುವಂತೆ ಮನವಿ ಮಾಡಿದರು.