ದಲಿತರನ್ನು ಯಾಮಾರಿಸಲು ಕೈನಿಂದ ಐಕ್ಯತಾ ಸಮಾವೇಶ
ಕೋಲಾರ,ಫೆ,೨೮- ಕಾಂಗ್ರೇಸ್ ಪಕ್ಷದವರು ಚುನಾವಣೆಯಲ್ಲಿ ದೀನದಲಿತರ ಆರಾಧ್ಯ ದೈವ ಅಂಬೇಡ್ಕರ್‌ರನ್ನು ಸೋಲಿಸಿದವರಿಗೆ ಪದ್ಮಭೂಷಣ ಕೊಟ್ಟವರು, ವಿಧಿವಶರಾದಾಗ ಅಂತ್ಯಸಂಸ್ಕಾರಕ್ಕೂ ಜಾಗ ನೀಡದೇ ಅಮಾನವೀಯವಾಗಿ ನಡೆದುಕೊಂಡವರು, ಇದೀಗ ಎಸ್ಸಿಪಿ, ಎಸ್‌ಟಿಪಿಯಡಿಯ ಪರಿಶಿಷ್ಟರ ೧೪೨೮೦ ಕೋಟಿ ಅನುದಾನ ಕಬಳಿಸಿ ೧೫ ಕೋಟಿ ಖರ್ಚು ಮಾಡಿ ದಲಿತರನ್ನು ಯಾಮಾರಿಸಲು ಐಕ್ಯತಾ ಸಮಾವೇಶ ಮಾಡುತ್ತಿದ್ದಾರೆಂದು ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.
ತಾಲ್ಲೂಕಿನ ಶಿಳ್ಳೆಂಗೆರೆ ಗ್ರಾಮದಲ್ಲಿ ಅಂಬೇಡ್ಕರ್ ಪ್ರಜ್ಞಾವಂತ ಯುವಕರ ಸಂಘದ ಆಶ್ರಯದಲ್ಲಿ ನಿರ್ಮಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ಅಂಬೇಡ್ಕರ್ ಜೀವಿನವಿಡಿ ಕಷ್ಟಪಟ್ಟು ಸಂವಿಧಾನದ ಮೂಲಕ ಶೋಷಿತರಿಗೆ ಅಮೃತ ನೀಡಿದ್ದಾರೆ, ದಲಿತರು ಎಂದರೆ ಪರಿಶಿಷ್ಟರು ಮಾತ್ರವಲ್ಲ ಎಲ್ಲಾ ಜಾತಿ, ಧರ್ಮದ ಬಡವರೂ ದಲಿತರೇ ಎಂದು ಸಾರಿದ್ದಾರೆ ಎಂದು ತಿಳಿಸಿದರು,.
ಅಂಬೇಡ್ಕರ್‌ರನ್ನು ಚುನಾವಣೆಯಲ್ಲಿ ಸೋಲಿಸಿದ ವ್ಯಕ್ತಿಗೆ ಪದ್ಮಭೂಷಣ ನೀಡಲಾಯಿತು, ಅವರ ವಿಧಿವಶರಾದಾಗ ದೆಹಲಿಯಲ್ಲಿ ಜಾಗ ನೀಡಲಿಲ್ಲ, ಮುಂಬೈಗೆ ಸಾಗಿಸಲು ಏರ್ ಆಂಬ್ಯುಲೆನ್ಸ್‌ಗೆ ೫ ಸಾವಿರ ನೀಡಲು ಅಂದು ಆಡಳಿತದಲ್ಲಿದ್ದ ಸರ್ಕಾರ ಮುಂದೆ ಬರಲಿಲ್ಲ, ಅಂತಹವರು ಈಗ ಮಾತು ಮಾತಿಗೂ ಓಟಿಗಾಗಿ ನಾವು ಅಂಬೇಡ್ಕರ್ ಪರ ಅಂತ ಮಾತನಾಡುತ್ತಿದ್ದಾರೆ ಇದರ ಬಗ್ಗೆ ದಲಿತರ ಎಚ್ಚರವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮೋದಿ ಗುಜರಾತ್ ಸಿಎಂ ಆಗಿದ್ದಾಗ ೨೦೧೦ ರಲ್ಲಿ ಸಂವಿಧಾನ ದಿನಾಚರಣೆ ಮಾಡಿ ಸಂವಿಧಾನವನ್ನು ದಸರಾ ಮಾದರಿ ಮೆರವಣಿಗೆ ನಡೆಸುವ ಮೂಲಕ ಸಂವಿಧಾನದ ಮಹತ್ವವನ್ನು ಸಮಾಜ ಮತ್ತು ದೇಶಕ್ಕೆ ತೊರಿಸಿಕೊಟ್ಟಿದ್ದರು ಎಂದು ಸ್ಮರಿಸಿದರು. ಅಂಬೇಡ್ಕರ್ ಸಂವಿಧಾನ ಇಲ್ಲವಾದಲ್ಲಿ ಟೀ ಮಾರುವ ವ್ಯಕ್ತಿ ಈ ದೇಶದ ಪ್ರಧಾನಿಯಾಗುತ್ತಿರಲಿಲ್ಲ ಎಂದು ಮೋದಿಯವರೇ ಹೇಳಿದ್ದಾರೆ ಎಂದರು.
ಅಂಬೇಡ್ಕರ್ ಹಿಂದೂಕೋಟ್‌ಬಿಲ್ ತಂದಾಗ ವಿರೋಧಿಸಿದವರು ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡರು ಆದರೆ ಅವರಿಗೆ ಸಂವಿಧಾನ ಬರೆದ ಮಹನೀಯನ ನೆನಪು ಆಗಲಿಲ್ಲ ಆದರೆ ಬಿಜೆಪಿ ಸರ್ಕಾರವೇ ಬಂದು ಭಾರತ ರತ್ನ ನೀಡಬೇಕಾಯಿತು ಎಂದು ಹೇಳಿದರು
ಅಂಬೇಡ್ಕರ್ ರೀಸರ್ಚ್ ಸೆಂಟರ್ ಮಾಡಿದ್ದು, ಅಂಬೇಡ್ಕರ್ ಕರ್ನಾಟಕಕ್ಕೆ ಬಂದ ಜಾಗಗಳನ್ನು ಸ್ಮಾರಕ ಮಾಡಲು ಕೆಜಿಎಫ್‌ಗೆ ಬೊಮ್ಮಾಯಿ ಸರ್ಕಾರ ಹಣ ಬಿಡುಗಡೆ ಮಾಡಿತ್ತು ಆದರೆ ಕಾಂಗ್ರೆಸ್ ಸರ್ಕಾರ ವಾಪಸ್ಸು ಪಡೆದಿದೆ ಎಂದು ಟೀಕಿಸಿದರು.
ಶೋಷಿತರಿಗೂ ಸಿಕ್ಕ ಸಮಾನತೆ-ಎಸ್ಪಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾತನಾಡಿ, ಪ್ರಪಂಚದಲ್ಲೇ ಅತಿ ಹೆಚ್ಚು ಪುತ್ಥಳಿಗಳು ಅಂಬೇಡ್ಕರ್ ಅವರದು, ರಾಜಕೀಯ,ಆರ್ಥಿಕ,ಸಾಮಾಜಿಕ ಸಮಾನತೆ ಅಂಬೇಡ್ಕರ್ ನೀಡಿದ ಭಿಕ್ಷೆ ಎಂದ ಅವರು, ಗ್ರಾಮದಲ್ಲಿ ಜಾತಿ,ಮತ ಮರೆದು ಇಡೀ ಊರಿನ ಜನತೆ ಅಂಬೇಡ್ಕರವ ಅವರ ಸುಂದರ ಪುತ್ಥಳಿ ನಿರ್ಮಾಣ ಮಾಡಿರುವುದು ಆದರ್ಶವಾಗಿದೆ ಎಂದು ಹೇಳಿದರು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಪುತ್ಥಳಿಯ ಅನಾವರಣದ ಮೂಲಕ ಅವರ ಹೆಸರಿಗೆ ಚ್ಯುತಿ ಬಾರದಂತೆ ನಡೆಯೋಣ, ಪ್ರತಿಗ್ರಾಮದಲ್ಲೂ ಮತ್ತೆ ನೂರಾರು ಅಂಬೇಡ್ಕರರು ಹುಟ್ಟಲು ಇದು ಸ್ಪೂರ್ತಿಯಾಗಲಿ ಎಂದು ಹಾರೈಸಿ, ವಿವಾದಗಳಿಲ್ಲದೇ ಪ್ರತಿಮೆ ಅನಾವರಣವಾಗಿದೆ ನಿಜಕ್ಕೂ ಈ ಊರಿನ ಎಲ್ಲಾ ಜನತೆ ಪ್ರಜ್ಞಾವಂತರು ಎಂದರು.
ಸಾಹಿತಿ ಶ್ರೀನಿವಾಸ್ ಮಾತನಾಡಿ, ೬ ಸಾವಿರ ಜಾತಿಗಳು, ೩ ಸಾವಿರ ಭಾಷೆಗಳಿರುವ ಭಾರತದಲ್ಲಿ ಅಂಬೇಡ್ಕರ್ ನೀಡಿರುವ ಸಂವಿಧಾನ ಏಕತೆಯನ್ನು ಮೂಡಿಸಿದೆ, ವಿಶ್ವದ ಅತ್ಯಂತ ಪ್ರತಿಭಾನ್ವಿತರಾಗಿ ಅಂಬೇಡ್ಕರ್ ಇದ್ದಾರೆ ಅವರ ಹುಟ್ಟಿದ ದಿನವನ್ನು ಅಂತರರಾಷ್ಟ್ರೀಯ ಸಮಾನತೆಯ ದಿನವಾಗಿಯೂ ಆಚರಿಸಲಾಗುತ್ತಿದೆ ಎಂದು ತಿಳಿಸಿದರು
ಅಂಬೇಡ್ಕರ್ ಪ್ರತಿಮೆ ಆನಾವರಣಗೊಳಿಸಿ ಸಂವಿಧಾನದ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಲ್ಲಾ ಕಡೆ ಜೈಭೀಮ್ ಘೋಷಣೆ ಮೊಳಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಪ್ರಜ್ಞಾವಂತ ಯುವಕರ ಸಂಘದ ಅಧ್ಯಕ್ಷ ಅರುಣ್‌ಕುಮಾರ್ ವಹಿಸಿದ್ದು, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಗ್ರಾ.ಪ೦ ಅಧ್ಯಕ್ಷ ಆರ್.ವೆಂಕಟೇಶಪ್ಪ, ಸದಸ್ಯರಾದ ವೇಣುಗೋಪಾಲ್, ಲಕ್ಷ್ಮಮ್ಮನಾರಾಯಣಪ್ಪ, ಸುರೇಶ್, ಮಾಜಿ ಸದಸ್ಯೆ ದೀಪಾ ಬಾಲಕೃಷ್ಣ, ನಿವೃತ್ತ ದೈಹಿಕ ಶಿಕ್ಷಕ ಮುನಿರಾಜು, ಗ್ರಾ.ಪಂ ಮಾಜಿ ಅಧ್ಯಕ್ಷ ರಾಜಗೋಪಾಲ್, ಶಿವಮೂರ್ತಿ, ರಾಜ್‌ಕುಮಾರ್, ವೇಣು, ಮುನೇಗೌಡ ಪೊಲೀಸ್ ನಾರಾಯಣ,ಪತ್ರಕರ್ತ ಕೆ.ವಿ.ನಾಗರಾಜ್, ಕಾಡುಗುರ ಸಂಸ್ಥೆಯ ನಾಗಭೂಷಣ್ ಸೇರಿದಂತೆ ಯುವಕರ ಸಂಘದ ಪದಾಧಿಕಾರಿಗಳು, ಶಿಳ್ಳೆಂಗೆರೆ ಗ್ರಾಮಸ್ಥರು ಉಪಸ್ಥಿತರಿದ್ದರು.