ಸಮಾಜದಿಂದ ಪಡೆದದ್ದು ಮತ್ತೆ ಸಮಾಜಕ್ಕೆ ಹಿಂದಿರುಗಿಸಿ
ವಿಜಯಪುರ, ಫೆ೨೮: ಜೀವನದಲ್ಲಿ ಸಮಾಜವು ನಮಗೆ ಉತ್ತಮ ಸ್ಥಾನಮಾನ, ಆರ್ಥಿಕತೆ, ನೆಮ್ಮದಿ ಎಲ್ಲವನ್ನು ನೀಡಿರುತ್ತದೆ. ಅದನ್ನು ಸಮಾಜದಿಂದ ಪಡೆದುಕೊಂಡ ನಾವು ಅವಶ್ಯಕತೆ ಇರುವಂತಹವರಿಗೆ ಮರು ಹಿಂದಿರುಗಿಸುವಂಥವರಾಗಬೇಕೆಂದು ಖ್ಯಾತ ಲೇಖಕಿ ಇಂದಿರಾಶಿವಣ್ಣ ರವರು ತಿಳಿಸಿದರು.
ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರದಂದು ಹಿರಿಯ ವಿದ್ಯಾರ್ಥಿಗಳ ಕೂಟದ ವತಿಯಿಂದ ಏರ್ಪಡಿಸಲಾಗಿದ್ದ “ಹಳೆಯ ವಿದ್ಯಾರ್ಥಿ ವೃಂದದವರ ಸಮ್ಮಿಲನ” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಾಲೆಯ ಅಭಿವೃದ್ಧಿಗೆ ಅವಶ್ಯಕವಾಗಿ ಕೈಗೊಳ್ಳಬೇಕಾದ ಜವಾಬ್ದಾರಿಗಳನ್ನು ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಾವುಗಳು ನೆರವೇರಿಸಬೇಕೆಂದು ಹಾಗೂ ೨೦೨೪-೨೫ ನೇ ಸಾಲಿನಲ್ಲಿ ನಾವುಗಳು ಕಲಿತು ವಿದ್ಯಾವಂತರಾದ ಈ ಶಾಲೆಯು ೭೫ ನೇಯ ವರ್ಷದ ಅಮೃತ ಮಹೋತ್ಸವ ಆಚರಿಸಲಿದ್ದು, ಅದನ್ನು ಅವಿಸ್ಮರಣೀಯವಾಗುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾದ ವೆಂಕಟೇಶ್‌ರವರು ಮಾತನಾಡಿ, ಈಗಾಗಲೇ ಸರ್ಕಾರದಿಂದ ರಚಿತವಾದ ಶಾಲಾ ಅಭಿವೃದ್ಧಿ ಸಮಿತಿ ಕಾರ್ಯ ನಿರ್ವಹಿಸುತ್ತಿದ್ದು, ಅದರೊಂದಿಗೆ ಹಿರಿಯ ವಿದ್ಯಾರ್ಥಿಗಳ ಸಂಘವು ಸೇರಿಕೊಂಡು ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕೆಂದು, ಈಗಾಗಲೇ ಹಲವು ದಾನಿಗಳ ಸಹಕಾರದೊಂದಿಗೆ ಶಾಲೆಯಲ್ಲಿ ನೆಲಹಾಸುಗಳನ್ನು ಹಾಸಿದ್ದು, ಮುಂದಿನ ವಾರದಂದು ಶಾಲಾ ವಾರ್ಷಿಕೋತ್ಸವ ಏರ್ಪಡಿಸಲಾಗಿದ್ದು, ಆ ಸಂದರ್ಭದಲ್ಲಿ ಬೆಂಗಳೂರಿನ ದಾನಿಗಳ ಸಹಕಾರದೊಂದಿಗೆ ಶಾಲೆಯ ಎಲ್ಲಾ ಮಕ್ಕಳಿಗೂ ಕ್ರೀಡಾ ಸಮವಸ್ತ್ರವನ್ನು ವಿತರಿಸಲಿರುವುದಾಗಿ ತಿಳಿಸಿದ್ದು, ಕಳೆದ ನಾಲ್ಕೈದು ವರ್ಷಗಳಿಂದಲೂ ಶಾಲೆಯ ಎಸ್ ಎಸ್ ಎಲ್ ಸಿ ಫಲಿತಾಂಶ ಶೇ ೭೫ ರಿಂದ ೯೦ ರ ವರೆಗೆ ಪಡೆದುಕೊಳ್ಳುತ್ತಿದ್ದು, ಇನ್ನು ಶಾಲೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದರೆ, ಸರ್ಕಾರಿ ಶಾಲೆಯಾದರೂ ಖಾಸಗಿ ಶಾಲೆಗಳನ್ನು ಮೀರಿಸುವಂತಹ ಉತ್ತಮ ಶಿಕ್ಷಣವನ್ನು, ಸೌಲಭ್ಯಗಳನ್ನು, ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡಬಹುದೆಂದು, ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅಡ್ಯಾಕ್ ಕಮಿಟಿಯನ್ನು ರಚಿಸಲಾಗಿದ್ದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ “ಮಾತೃ ಭಾಷಾ” ಕನ್ನಡ ಆಪ್ ನಿರ್ಮಿಸಿದ ಆರ್.ಚಂದನ್ ಕುಮಾರ್‌ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಕಾರ್ಯದರ್ಶಿಯಾಗಿ ಶಾಲಾ ಶಿಕ್ಷಕರಾಗಿರುವ ಬಿಎಸ್ ನಾರಾಯಣ್, ಖಜಾಂಚಿಯಾಗಿ ವೀಣಾ ನಾಗರಾಜ್, ಸದಸ್ಯರುಗಳಾಗಿ ನಿವೃತ್ತ ಕೃಷಿ ಇಲಾಖೆಯ ಪದ್ಮರಾಜು, ಹಿರಿಯ ಪತ್ರಕರ್ತರಾದ ಯಲಹಂಕದ ವೆಂಕಟಚಲಪತಿ, ನಿವೃತ್ತ ಅಸಿಸ್ಟೆಂಟ್ ಕಮಿಷನರ್ ರಹೀಂ, ವ್ಯಾಪಾರಿ ಸಿ.ಸುರೇಶ್ ಬಾಬು, ಬಿಎಸ್‌ಎನ್‌ಎಲ್‌ನ ನಿವೃತ್ತ ನೌಕರರಾದ ಎನ್ ರುದ್ರಮೂರ್ತಿ, ಸೂರ್ಯನಾರಾಯಣ ಬಾಬು ಆಯ್ಕೆಯಾಗಿದ್ದು, ಸಲಹಾ ಸಮಿತಿಯ ಅಧ್ಯಕ್ಷರಾಗಿ ಇಂದಿರಾಶಿವಣ್ಣ, ಗೌರವಾಧ್ಯಕ್ಷರಾಗಿ ಶಾಲಾ ಉಪ ಪ್ರಾಂಶುಪಾಲರಾದ ವೆಂಕಟೇಶ್, ನಿವೃತ್ತ ಪೌರಾಯುಕ್ತರಾದ ವಿ.ಶಿವಕುಮಾರ್, ಬೆಂಗಳೂರಿನ ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಅಂಬಿಕಾ, ಕಾನೂನು ಸಲಹೆಗಾರರಾಗಿ ಹಿರಿಯ ವಕೀಲರಾದ ಬೈರೇಗೌಡರು ಆಯ್ಕೆಯಾಗಿದ್ದು, ಮುಂದಿನ ಸಭೆಗಳಲ್ಲಿ ಇನ್ನು ಹೆಚ್ಚಿನ ಸದಸ್ಯರುಗಳನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
ಹಾಗೂ ೨೦೬೨-೬೩ ನೇ ಸಾಲಿನಿಂದ ಇದುವರೆವಿಗೂ ಹಳೆಯ ವಿದ್ಯಾರ್ಥಿಗಳ ಪ್ರತಿ ಬ್ಯಾಚ್ ಮುಖ್ಯಸ್ಥರಾಗಿ ಒಬ್ಬೊಬ್ಬರನ್ನು ನೇಮಿಸಲಾಗಿದ್ದು, ಅವರು ಸಮಿತಿಯ ಕಾರ್ಯಕಲಾಪ ಹಾಗೂ ವಿಚಾರಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಂತೆ ಮಾಡಬೇಕೆಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಎಂ ಅನ್ನಪೂರ್ಣ, ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಮ.ಜಯದೇವ್ ಮತ್ತಿತರರು ಉಪಸ್ಥಿತರಿದ್ದರು.